ADVERTISEMENT

ವೈದ್ಯರು, ಸಿಬ್ಬಂದಿಯೇ ನಮ್ಮ ಪಾಲಿನ ದೇವರು

ಮಗನಿಗೆ ಪಾಸಿಟಿವ್ ಎಂದು ತಿಳಿದಾಗ ಆತನ ಕ್ಷಮೆ ಕೇಳಿದ್ದೆ: ಇಂಡೀಕರ್

ವೆಂಕಟೇಶ ಜಿ.ಎಚ್.
Published 18 ಜುಲೈ 2020, 17:02 IST
Last Updated 18 ಜುಲೈ 2020, 17:02 IST
ಎಚ್.ಕೆ.ಇಂಡೀಕರ
ಎಚ್.ಕೆ.ಇಂಡೀಕರ   

ಬಾಗಲಕೋಟೆ: ಮಗನೇ ನನಗೆ ಕ್ಷಮಿಸಿ ಬಿಡಪ್ಪಾ. ಕರ್ತವ್ಯದ ಸಂದರ್ಭದಲ್ಲಿ ನನಗೆ ಸೋಂಕು ತಗುಲಿದೆ. ಅಪ್ಪನಿಂದ ನನಗೆ ಬಂತು ಅನ್ನೋದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ.

ಇದು ಮುಧೋಳದ ಹೆಡ್‌ಕಾನ್‌ಸ್ಟೆಬಲ್‌ ಎಚ್.ಕೆ.ಇಂಡೀಕರ್ ತಮ್ಮ ಮಗನಿಗೆ ಕೊರೊನಾ ಪಾಸಿಟಿವ್ ಆಗಿರುವ ಸುದ್ದಿ ಕೇಳಿ ಹೇಳಿದ ಮೊದಲ ಮಾತು.

ಏಪ್ರಿಲ್ 15ರಂದು ಸಹೊದ್ಯೋಗಿಯೊಬ್ಬರಿಗೆ ಸೋಂಕು ದೃಢಪಟ್ಟ ಕಾರಣ ಕಚೇರಿಯಲ್ಲಿದ್ದವರ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದರು. ಆಗ ಇಂಡೀಕರ್ ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಕುಟುಂಬದ ಸದಸ್ಯರಿಗೆ ತಪಾಸಣೆ ಮಾಡಿದಾಗ ಮಗನಿಗೆ ಪಾಸಿಟಿವ್ ಆಗಿತ್ತು.

ADVERTISEMENT

ವಿಶೇಷವೆಂದರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪ್ಪ– ಮಗ ಇಬ್ಬರೂ ಕೋವಿಡ್ ಗೆದ್ದು ಬಂದಿದ್ದಾರೆ. ಚಿಕಿತ್ಸೆ ಅವಧಿಯಲ್ಲಿಯೇ ಇಂಡೀಕರ್ ತಮ್ಮ 44ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಚಿಕಿತ್ಸೆ ಅವಧಿಯಲ್ಲಿ ತಮಗಾಗಲಿ, ಮಗನಿಗಾಗಲಿ ಸೋಂಕಿನ ಯಾವ ಲಕ್ಷಣವೂ ಇರಲಿಲ್ಲ. ಜ್ವರ, ಶೀತವೂ ಆಗಿರಲಿಲ್ಲ. ತಾವು ಮಾತ್ರವಲ್ಲ ಆ ಸಂದರ್ಭದಲ್ಲಿ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ಮಂದಿಯಲ್ಲಿ ಯಾರೊಬ್ಬರಿಗೂ ಸೋಂಕಿನ ಲಕ್ಷಣ ಇರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ.

ಆಸ್ಪತ್ರೆಯ ವೈದ್ಯರು, ನರ್ಸಿಂಗ್ ಹಾಗೂ ಸ್ವಚ್ಛತಾ ಸಿಬ್ಬಂದಿ ಖಂಡಿತವಾಗಿಯೂ ನಮ್ಮೆಲ್ಲರ ಪಾಲಿನ ದೇವರು. ಒಂದಷ್ಟು ಅಳುಕಿಲ್ಲದೆ ನಮಗೆ ಚಿಕಿತ್ಸೆ ಕೊಡುತ್ತಿದ್ದರು. ತಿನ್ನಲು ಬಾದಾಮಿ, ಜೇನುತುಪ್ಪ, ನಿಂಬೆಹಣ್ಣಿನ ರಸ, ಚಹಾ, ತಿಂಡಿ, ಊಟ ಕೊಟ್ಟು ಚೆನ್ನಾಗಿ ನೋಡಿಕೊಂಡರು ಎಂದು ಸ್ಮರಿಸಿದರು.

ಧೈರ್ಯಂ ಸವರ್ತ್ರಸಾಧನಂ: ಕೋವಿಡ್ ಪಾಸಿಟಿವ್ ಆಗಿದೆ ಎಂಬ ಸುದ್ದಿ ಕೇಳಿ ಐದಾರು ನಿಮಿಷ ನನಗೂ ಘಾಸಿಯಾಗಿದ್ದು ನಿಜ. ಆದರೆ ತಕ್ಷಣ ಧೈರ್ಯ ತಂದುಕೊಂಡೆ. ಇದು ಸಾವು ತರುವ ರೋಗವಲ್ಲ ಎಂಬುದನ್ನು ಅರಿತು, ಕುಟುಂಬದವರಿಗೂ ಧೈರ್ಯತುಂಬಿದೆ. ಹೀಗಾಗಿ ಯಾರಿಗೇ ಕೋವಿಡ್ ಬಂದರೂ ಮೊದಲು ಧೈರ್ಯ ತಂದುಕೊಳ್ಳಿ. ಯಾವ ಕಾರಣಕ್ಕೂ ಧೃತಿಗೆಡಬೇಡಿ. ಧೃಡ ಸಂಕಲ್ಪವೇ ರೋಗ ಓಡಿಸಲು ಮದ್ದು ಎಂದು ಇಂಡೀಕರ್ ಸಲಹೆ ನೀಡುತ್ತಾರೆ.

ಮೇ 10ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿ ಮೇ 25ರಿಂದ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.