ADVERTISEMENT

ಕೋವಿಡ್ ಸೋಂಕಿನ ಲಕ್ಷಣ: ಐವರು ಸಾವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 17:04 IST
Last Updated 18 ಜುಲೈ 2020, 17:04 IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿನ ಲಕ್ಷಣಗಳಿಂದ ಶನಿವಾರ ಐವರು ಸಾವಿಗೀಡಾಗಿದ್ದಾರೆ. ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನಷ್ಟೇ ಫಲಿತಾಂಶ ಬರಬೇಕಿದೆ. ಆದರೆ ಎಲ್ಲರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾವಳಿ ಅನ್ವಯ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತದೇಸಾಯಿ ತಿಳಿಸಿದ್ದಾರೆ.

ಬಾಗಲಕೋಟೆ ವಾರ್ಡ್ ನಂ6ರ ನಿವಾಸಿ 63 ವರ್ಷದ ಮಹಿಳೆಯನ್ನು ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದಾರೆ. ಜಮಖಂಡಿಯ 52 ವರ್ಷದ ಪುರುಷ ಶನಿವಾರ ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದಾರೆ.

ಬೀಳಗಿ ತಾಲ್ಲೂಕು ಅಮಲಝರಿಯ 56 ವರ್ಷದ ವ್ಯಕ್ತಿ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯಿಂದ ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರುವಾಗ ಮೃತಪಟ್ಟಿದ್ದಾರೆ. ಇವರು ಮೊದಲಿನಿಂದಲೂ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ADVERTISEMENT

ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ 72 ವರ್ಷದ ವೃದ್ಧ ಜುಲೈ 11ರಂದು ತೀವ್ರ ಉಸಿರಾಟದ ತೊಂದರೆಯ ಕಾರಣ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಬಹು ಅಂಗಾಂಗ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಗಲಕೋಟೆಯ 60 ವರ್ಷದ ವೃದ್ಧೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.