ಹುನಗುಂದ: ‘ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಹುನಗುಂದ-ಇಳಕಲ್ ಅವಳಿ ಪಟ್ಟಣಗಳು ಸೇರಿ ಮತಕ್ಷೇತ್ರದ ಇತರ ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ನೂರಾರು ಕೋಟಿ ಅನುದಾನ ತಂದ ತೃಪ್ತಿ ನನಗಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಮಹಾಂತೇಶ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಪುರಸಭೆ ಸುವರ್ಣ ಮಹೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನಿವೇಶನ ರಹಿತ ಬಡವರಿಗೆ 900ಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಆಶ್ರಯ ಯೋಜನೆಯ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ನಗರದ ಇತಿಹಾಸದಲ್ಲಿ 500 ಆಶ್ರಯ ಫಲಾನುಭವಿಗಳಿಗೆ ಮನೆಗಳ ಕಟ್ಟಡ ಕಾರ್ಯಾಚರಣೆಗೆ ಸರ್ಕಾರಿ ಆದೇಶ ಪತ್ರ ಕೊಟ್ಟಿರುವುದು ಇದೇ ಮೊದಲು’ ಎಂದು ಹೇಳಿದರು.
‘ಮೂರು ಬಾರಿ ಶಾಸಕನಾದರೂ ಮಾಡಿದ ಕೆಲಸ ಏನು? ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ಹರಿಹಾಯ್ದರು. ಕೆಲಸ ಮಾಡಿ ತಾಕತ್ತು, ದಮ್ಮು ತೋರಿಸುವ ವ್ಯಕ್ತಿ ಕಾಶಪ್ಪನವರ’ ಎಂದರು.
ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಮಾತನಾಡಿ, ‘ಅಧ್ಯಕ್ಷೆ ಆಗಿರುವುದು ನನ್ನ ಭ್ಯಾಗ್ಯ. ಈ ಅವಕಾಶ ಕಲ್ಪಿಸಿದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸದಾ ಚಿರಋಣಿ. ಅಧಿಕಾರ ಶಾಶ್ವತ ಅಲ್ಲ. ನಾವು ಮಾಡುವ ಕಾರ್ಯಗಳು ಶಾಶ್ವತ. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು’ ಎಂದರು.
ಗಚ್ಚಿನಮಠದ ಅಮರೇಶ್ವರ ದೇವರು ಹಾಗೂ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಸಿದ್ದಪ್ಪ ಹೊಸೂರ, ಮಾಜಿ ಸದಸ್ಯ ಮಹಾಂತೇಶ ಅವಾರಿ ಮಾತನಾಡಿದರು.
ಪುರಸಭೆ ಕಚೇರಿಯಲ್ಲಿ ನಿರ್ಮಿಸಿದ ನೂತನ ಸಭಾಭವನದ ಉದ್ಘಾಟನೆ, ಹೊನ್ನಪುರ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಾಧಕರು ಮತ್ತು ಪುರಸಭೆ ಹಿಂದಿನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಡುವಿನಮನಿ, ಮಾಜಿ ಅಧ್ಯಕ್ಷ ಯಮನಪ್ಪ ಬೆಣ್ಣಿ, ಶರಣು ಬೆಲ್ಲದ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಮುಖಂಡರಾದ ಸಂಗಣ್ಣ ಗಂಜಿಹಾಳ, ಶಿವಾನಂದ ಕಂಠಿ, ಲಿಂಬಣ್ಣ ಮುಕ್ಕಣ್ಣವರ, ಮುತ್ತಣ್ಣ ಕಲಗೋಡಿ, ಜಬ್ಬಾರ ಕಲಬುರಗಿ ತಾಲ್ಲೂಕು ಪಂಚಾಯಿತಿ ಇಒ ಮುರುಳಿಧರ ದೇಶಪಾಂಡೆ ಇದ್ದರು. ಬಸವರಾಜೇಶ್ವರಿ ಹೂಗಾರ ಪ್ರಾರ್ಥಿಸಿದರು. ಎಂ.ಬಿ.ಒಂಟಿ ಮತ್ತು ಎಸ್.ಕೆ. ಕೊನೆಸಾಗರ ನಿರೂಪಿಸಿದರು.
ಅಧಿಕಾರ ನಾನೊಬ್ಬನೇ ಅನುಭವಿಸಿಲ್ಲ’
‘ಮತದಾರರು ಕೊಟ್ಟ ಅಧಿಕಾರವನ್ನು ನಾನೊಬ್ಬನೇ ಅನುಭವಿಸಿಲ್ಲ. ಪ್ರತಿಯಾಗಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೂ ಅಧಿಕಾರ ಭಾಗ್ಯ ನೀಡುವಲ್ಲಿ ಶ್ರಮವಹಿಸಿದ್ದೇನೆ. ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಕೆಪಿಎಸ್ ಟಿಎಪಿಸಿಎಂಎಸ್ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಆಯ್ಕೆಯಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.