ADVERTISEMENT

ಇ-ಖಾತೆ ಉತಾರ: ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 14:12 IST
Last Updated 5 ಮಾರ್ಚ್ 2025, 14:12 IST
ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಇ-ಖಾತೆ ಉತಾರ ಪಡೆಯುವ ಕುರಿತು ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು
ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಇ-ಖಾತೆ ಉತಾರ ಪಡೆಯುವ ಕುರಿತು ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು   

ಪ್ರಜಾವಾಣಿ ವಾರ್ತೆ

ತೇರದಾಳ: ಇಲ್ಲಿನ ಪುರಸಭೆ ಅಧಿಕಾರಿಗಳು ಇ-ಖಾತೆ ಉತಾರ ಕುರಿತು ಬುಧವಾರ ಸಾರ್ವಜನಿಕರಿಗೆ ಕರ ಪತ್ರಗಳ ವಿತರಣೆ ಜತೆಗೆ ಆಯಾ ಭಾಗಗಳಿಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದರು.

ಕುಡಚಿ ರಸ್ತೆಯ ಒಂದನೇ ಕಾಲುವೆ ಹತ್ತಿರ ನಿವಾಸಿಗಳಿಗೆ ಇ-ಖಾತೆ ಉತಾರ ಮಾಡಿಕೊಳ್ಳಲು ನೀಡಬೇಕಾದ ದಾಖಲೆಗಳು ಕುರಿತು ಮಾಹಿತಿ ನೀಡಿದರು. ಹಾಗೂ ಸಕಾಲಕ್ಕೆ ಆಸ್ತಿ ತೆರಿಗೆ, ನೀರಿನ ಕರ ಪಾವತಿಸುವಂತೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಸೂಚನೆ ನೀಡಿದರು. 

ADVERTISEMENT

ಈಗಾಗಲೇ ಇ-ಖಾತೆ ಉತಾರ ನೀಡಲು ಆರಂಭಿಸಲಾಗಿದೆ. ಕೆಲವು ಜನರ ಸೂಕ್ತ ದಾಖಲೆಗಳು ಇಲ್ಲದ ಕಾರಣ ಇ-ಖಾತೆ ಉತಾರ ಮಾಡಿಕೊಡಲು ಸಾಧ್ಯ ಆಗುತ್ತಿಲ್ಲ. ಸಾಧ್ಯವಾದಷ್ಟು ಅಗತ್ಯ ದಾಖಲೆಗಳನ್ನು ಸಾರ್ವಜನಿಕರು ಒದಗಿಸಬೇಕು ಎಂದು ಹೇಳಿದರು. 

ಪುರಸಭೆ ವ್ಯಾಪ್ತಿಯೊಳಗಿನ ಆರ್‌ಟಿಸಿ ಪಹಣಿ ಹೊಂದಿದವರು ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ ಕಟ್ಟಿದ ಜಾಗವನ್ನು ಬಿ-ಖಾತೆ ಮುಖಾಂತರ ಪುರಸಭೆ ವ್ಯಾಪ್ತಿಗೆ ಒಳಪಡಿಸಿಕೊಂಡು ಇ-ಉತಾರ ನೀಡಲಾಗುವುದು. ಸಾರ್ವಜನಿಕರು ಸರ್ಕಾರ ಜಾರಿಗೊಳಿಸಿರುವ ಹೊಸ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಸಿಒ ಆನಂದ ಕೆಸರಗೊಪ್ಪ ಹೇಳಿದರು. ಕಂದಾಯ ಅಧಿಕಾರಿ ಎಫ್.ಬಿ. ಗಿಡ್ಡಿ, ಚಂದ್ರಕಾಂತ ಕಾಂಬಳೆ, ಬರಮು ದನಗರ, ಗದಗೆಪ್ಪ ಕುಂಬಾರ, ವಿಷ್ಣು ಘಟ್ಟೆನ್ನವರ ಇದ್ದರು.

ಇಲ್ಲದ ದಾಖಲೆ ಎಲ್ಲಿಂದ ತರುವುದು?

ಇ–ಖಾತೆ ಉತಾರ ಮಾಡುವ ಪ್ರಕ್ರಿಯೆಗಳ ಬಗ್ಗೆ ಪುರಸಭೆ ಸದಸ್ಯ ಆದೀನಾಥ ಸಪ್ತಸಾಗರ ಇದರ ಬಗ್ಗೆ ಅಪಸ್ವರ ಎತ್ತಿದ್ದಾರೆ. `ಇ-ಖಾತೆ ಉತಾರ ಮಾಡಲು ಜಾಗವು ಹೇಗೆ ಬಂದಿದೆ ಎಂಬುದರ ಬಗ್ಗೆ ದಾಖಲೆ ನೀಡಲು ಹೇಳುತ್ತಿದ್ದಾರೆ. ಆದರೆ ಮನೆ ನಿವೇಶನ ಭೂಮಿ ಹಿರಿಯರಿಂದ ಬಂದಿದ್ದರೆ ಅವರಿಗೆ ಹೇಗೆ ಬಂತು ಎಂಬುದರ ದಾಖಲೆ ನೀಡಲು ಹೇಳುತ್ತಾರೆ. ಅಂತಹ ದಾಖಲೆಗಳನ್ನು ಈಗ ನಾವು ಎಲ್ಲಿಂದ ತರಬೇಕು. ಅಜ್ಜನಿಂದ ಅಪ್ಪನಿಗೆ ಅಪ್ಪನಿಂದ ಮಗನಿಗೆ ಹೀಗೆ ಆಸ್ತಿಗಳು ವರ್ಗಾವಣೆಗೊಂಡಿರುತ್ತವೆ. ನಿಮ್ಮ ಮನೆತನಕ್ಕೆ ಜಾಗ ಯಾರಿಂದ ಯಾವಾಗ ಬಂದಿದೆ ಎಂಬ ದಾಖಲೆ ನೀಡಿ ಅಂದರೆ ಹೇಗೆ ಎಂದು ಪ್ರಶ್ನಿಸಿರುವ ಅವರು ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.