ADVERTISEMENT

ಕೂಡಲಸಂಗಮ: ಎರಡು ದಶಕ ಕಳೆದರೂ ಮೂಲ ಸೌಲಭ್ಯ ಇಲ್ಲ

ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಾ.ಪಂ ಕಟ್ಟಡ, ಪಶು ಆಸ್ಪತ್ರೆ ನಿರುಪಯುಕ್ತ

ಶ್ರೀಧರ ಗೌಡರ
Published 4 ಡಿಸೆಂಬರ್ 2024, 5:54 IST
Last Updated 4 ಡಿಸೆಂಬರ್ 2024, 5:54 IST
ಕೂಡಲಸಂಗಮದಲ್ಲಿ ಎರಡು ದಶಕಗಳಿಂದ ನಿರುಪಯುಕ್ತವಾದ ಗ್ರಾಮ ಪಂಚಾಯಿತಿ ಕಟ್ಟಡ
ಕೂಡಲಸಂಗಮದಲ್ಲಿ ಎರಡು ದಶಕಗಳಿಂದ ನಿರುಪಯುಕ್ತವಾದ ಗ್ರಾಮ ಪಂಚಾಯಿತಿ ಕಟ್ಟಡ   

ಕೂಡಲಸಂಗಮ: ಕೂಡಲಸಂಗಮ ಪುನರ್ವಸತಿ ಕೇಂದ್ರವಾಗಿ ಎರಡು ದಶಕ ಕಳೆದರೂ ಇಲ್ಲಿಯ ನಿವಾಸಿಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೌಕರ್ಯ ಕಲ್ಪಿಸಬೇಕಾದ ಗ್ರಾಮ ಪಂಚಾಯಿತಿ, ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಎರಡು ದಶಕಗಳಿಂದ ಪುನರ್ವಸತಿ ಕೇಂದ್ರಕ್ಕೆ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಮುಂತಾದವುಗಳಿಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುನರ್ವಸತಿ ಪುನರ್‌ ನಿರ್ಮಾಣ ಇಲಾಖೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ ಸೌಲಭ್ಯಗಳು ಮಾತ್ರ ಕೇಂದ್ರದ ನಿವಾಸಿಗಳಿಗೆ ದೊರೆಯುತ್ತಿಲ್ಲ. ಖರ್ಚು ಮಾತ್ರ ಕಾಗದದಲ್ಲಿ ದಾಖಲಾಗುತ್ತಿದೆ.

ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ 1994ರಲ್ಲಿ ನಿರ್ಮಿಸಿದ ಚರಂಡಿ, ರಸ್ತೆ ಈಗ ಸಂಪೂರ್ಣ ಹಾಳಾಗಿವೆ. ರಸ್ತೆಗಿಂತ ಕೆಳಮಟ್ಟದಲ್ಲಿ ಚರಂಡಿ ನಿರ್ಮಿಸಿದ ಪರಿಣಾಮ ರಸ್ತೆಯಲ್ಲಿಯ ಮಣ್ಣು ಚರಂಡಿ ಸೇರಿದೆ. ಚರಂಡಿಯ ನೀರು ಹೊರಹೊಗಲು ಮಾರ್ಗಗಳೇ ಇಲ್ಲದ ಪರಿಣಾಮವಾಗಿ ನಿವಾಸದ ಜಾಗದಲ್ಲಿಯೇ ಅಲ್ಲಲ್ಲಿ ಕೊಳಚೆ ನೀರು ಸಂಗ್ರಹವಾಗಿ ಕೊಳೆತು ನಾರುತ್ತಿದೆ.

ADVERTISEMENT

ಬಹುತೇಕ ಕಡೆ ರಸ್ತೆಗಳೇ ಇಲ್ಲ, ಮಳೆ ಸುರಿದರೆ ಇಲ್ಲಿಯ ನಿವಾಸಿಗಳು ಮನೆ ತಲುಪಲು ಹರಸಾಹಸ ಪಡಬೇಕಿದೆ. ರಸ್ತೆಯಲ್ಲಿಯೇ ಮುಳ್ಳುಕಂಟಿಗಳು ಬೆಳೆದಿವೆ. ಎಲ್ಲೆಡೆ ಮುಳ್ಳುಕಂಟಿಗಳೇ ತುಂಬಿದ್ದರೂ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆ ಮಾಡಿಸುತ್ತಿಲ್ಲ. ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ.

ಕಳೆದ ವರ್ಷ ₹ 9 ಕೋಟಿ ವೆಚ್ಚದಲ್ಲಿ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ರಸ್ತೆ, ಚರಂಡಿ ನಿರ್ಮಿಸಿದೆ. ರಸ್ತೆಗಳು ಕೆಲವು ಕಡೆ ಹಾಳಾಗಿವೆ. ಯೋಜನೆಯಂತೆ ಚರಂಡಿಗಳು ನಿರ್ಮಾಣವಾಗಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನಿರ್ಮಿಸಿದ ಗ್ರಾಮ ಪಂಚಾಯಿತಿ ಕಟ್ಟಡ, ಪಶು ಆಸ್ಪತ್ರೆ ನಿರುಪಯುಕ್ತವಾಗಿವೆ. ಅವನತಿಯ ಹಂತಕ್ಕೆ ಬಂದಿವೆ. ಇನ್ನೂ ಕೆಲವು ಸರ್ಕಾರಿ ಕಟ್ಟಡಗಳನ್ನು ಖಾಸಗಿ ವ್ಯಕ್ತಿಗಳು ಬಳಸುತ್ತಿದ್ದಾರೆ. ಮೂಲ ಗ್ರಾಮದಲ್ಲಿಯೇ ಪಂಚಾಯಿತಿ ಕಟ್ಟಡ, ಪಶು ಆಸ್ಪತ್ರೆ ದುರಸ್ತಿ ಮಾಡಿಸುವ ಅಧಿಕಾರಿಗಳು ಪುನರ್ವಸತಿ ಕೇಂದ್ರದ ಕಟ್ಟಡ ಏಕೆ ಬಳಸುತ್ತಿಲ್ಲ ಎಂಬುದು ನಿಗೂಢವಾಗಿದೆ.

ಜಿಲ್ಲಾ ಪಂಚಾಯಿತಿ ಜಲ ಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಯಲ್ಲಿ 1,066 ಮನೆಗಳಿಗೆ ನಲ್ಲಿ ನೀರು ಕಲ್ಪಿಸುವ ಯೋಜನೆಯನ್ನು 2021ರಲ್ಲಿ ಆರಂಭಿಸಿ, ಮುಕ್ತಾಯಗೊಳಿಸಿದೆ. ₹ 1.35 ಕೋಟಿ ವೆಚ್ಚ ಮಾಡಿದೆ. ಆದರೆ ಎಲ್ಲ ಮನೆಗಳಿಗೆ ಸಮರ್ಪಕವಾಗಿ ಒಂದು ಗಂಟೆಯೂ ನೀರು ಬರುತ್ತಿಲ್ಲ. ಇಲ್ಲಿಯ ನಿವಾಸಿಗಳು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಗ್ರಾಮ, ತಾಲ್ಲೂಕು ಪಂಚಾಯಿತಿಯಿಂದಲೂ ಲಕ್ಷಾಂತರ ರೂಪಾಯಿ ವೆಚ್ಚವಾದರೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿಲ್ಲ.

ಕೂಡಲಸಂಗಮದಲ್ಲಿ ಎರಡು ದಶಕಗಳಿಂದ ನಿರುಪಯುಕ್ತವಾದ ಪಶು ಆರೋಗ್ಯ ಕೇಂದ್ರ
ಕೂಡಲಸಂಗಮದಲ್ಲಿ ಮಳೆ ಬಂದಾಗ ಕೆಸರುಗದ್ದೆಯಾಗುವ ರಸ್ತೆ
ರಸ್ತೆ ಚರಂಡಿಗಳು ಇಲ್ಲದೇ ತೊಂದರೆ ಅನುಭವಿಸುತ್ತಿದ್ದೇವೆ. ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ಕರ ಕಟ್ಟುತ್ತೇವೆ. ಆದರೆ ಅಧಿಕಾರಿಗಳು ರಸ್ತೆ ಚರಂಡಿ ನಿರ್ಮಿಸುತ್ತಿಲ್ಲ.
–ಸಿದ್ದು ಹಡಪದ ನಿವಾಸಿ
ಪುನರ್ವಸತಿ ಕೇಂದ್ರ ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸುತ್ತೇನೆ.
–ಗಂಗಮ್ಮ, ರಾಂಪುರ ಅಧ್ಯಕ್ಷ ಗ್ರಾಮ ಪಂಚಾಯಿತಿ ಕೂಡಲಸಂಗಮ

‘ಮೂಲ ಗ್ರಾಮದಲ್ಲಿ ಮಾತ್ರ ಅಭಿವೃದ್ಧಿ’

ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿ 300ಕ್ಕೂ ಅಧಿಕ ಮನೆಗಳು 1200ಕ್ಕೂ ಅಧಿಕ ಜನ ವಾಸವಿದ್ದಾರೆ. ಪಂಚಾಯಿತಿ ಕಾರ್ಯಕ್ಕೆ ಬ್ಯಾಂಕ್‌ ವ್ಯವಹಾರಕ್ಕೆ ಅಂಚೆ ಕಚೇರಿಗೆ 3 ಕಿ.ಮೀ ದೂರದ ಮೂಲ ಗ್ರಾಮಕ್ಕೆ ಹೊಗಬೇಕು. ಚುನಾವಣೆ ಬಂದಾಗ ಮತದಾನ ಮಾಡಲು ಇಲ್ಲಿಯ ನಿವಾಸಿಗಳು ಮೂಲಗ್ರಾಮಕ್ಕೆ ಹೋಗಬೇಕು. ಮೂಲ ಗ್ರಾಮದಲ್ಲಿಯೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದರಿಂದ ನಿವಾಸಿಗಳು ಪುನರ್ವಸತಿ ಕೇಂದ್ರಕ್ಕೆ ಹೊಗಲು ಇಚ್ಛಿಸುತ್ತಿಲ್ಲ. ಶೇ 60ರಷ್ಟು ಜನ ಮೂಲ ಗ್ರಾಮದಲ್ಲಿಯೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.