ADVERTISEMENT

ಗೋಮಾಳದಲ್ಲಿ ಹೊಲ, ಗಣಿಗಾರಿಕೆ

ಒತ್ತುವರಿ ತೆರವಿಗೆ ಮುಂದಾಗದ ಜಿಲ್ಲಾಡಳಿತ: ನಿವಾಸಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:40 IST
Last Updated 7 ಜನವರಿ 2026, 6:40 IST
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಸರ್ಕಾರದ ಗೋಮಾಳ ಜಾಗವನ್ನು ಒತ್ತುವರಿ ಮಾಡಿ ಬೆಳೆ ಬೆಳೆಯಲಾಗಿದೆ
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಸರ್ಕಾರದ ಗೋಮಾಳ ಜಾಗವನ್ನು ಒತ್ತುವರಿ ಮಾಡಿ ಬೆಳೆ ಬೆಳೆಯಲಾಗಿದೆ   

ಜಮಖಂಡಿ: ತಾಲ್ಲೂಕಿನ ಕೊಣ್ಣೂರು ಗ್ರಾಮದ 300 ಎಕರೆಗೂ ಅಧಿಕ ಸರ್ಕಾರಿ ಗೋಮಾಳ ಜಾಗವಿದ್ದು, ಆ ಪೈಕಿ 100 ಎಕರೆಗೂ ಅಧಿಕ ಪ್ರದೇಶ ಒತ್ತುವರಿ ಆಗಿದೆ. ಸರ್ಕಾರ ರಕ್ಷಣೆ ಮಾಡದೆ ಬಿಟ್ಟಿರುವುದರಿಂದ ಸಾರ್ವಜನಿಕರು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಮತ್ತೆ ಕೆಲವರು ಗಣಿಗಾರಿಕೆಯನ್ನೂ ಮಾಡುತ್ತಿದ್ದಾರೆ.

ಕೊಣ್ಣೂರ ಗ್ರಾಮದ ಸರ್ವೆ ನಂಬರ್ 247ರಲ್ಲಿ 303 ಎಕರೆ ಗೋಮಾಳ ರಾಜ್ಯಪಾಲರ ಹೆಸರಿನಲ್ಲಿದೆ. ಅದರಲ್ಲಿ 18 ಎಕರೆ ಜನವಸತಿ ಪ್ರದೇಶಕ್ಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರ ಹೆಸರಿನಲ್ಲಿದ್ದು, 8 ಎಕರೆ ಅಂಬೇಡ್ಕರ್ ವಸತಿ ಶಾಲೆಗೆ, 1 ಎಕರೆ ಕನ್ನಡ ಪ್ರಾಥಮಿಕ ಶಾಲೆ ಮಡ್ಡಿ ಪ್ಲಾಟ್ ನೀಡಲಾಗಿದೆ. ಒತ್ತುವರಿ ಹೊರತಾಗಿ ಉಳಿದ ಜಾಗ ಸರ್ಕಾರದ ಅಧೀನದಲ್ಲಿದೆ. ಈ ಒತ್ತುವರಿ ಭೂಮಿಯನ್ನು ರಕ್ಷಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

‘ಈ ಹಿಂದೆ ಈ ಸ್ಥಳವನ್ನು ಕೊಣ್ಣೂರ, ಮಂಟೂರ, ಗಣಿ ಸೇರಿದಂತೆ ಸುತ್ತಲಿನ ಗ್ರಾಮಗಳ ಕುರಿಗಾಹಿಗಳು ಕುರಿ ಮೇಯಿಸಲು ಬಳಸಿಕೊಳ್ಳುತ್ತಿದ್ದರು. ಈಚೆಗಿನ ದಿನಗಳಲ್ಲಿ ಕೆಲವರು ಗುಡ್ಡಗಾಡು ಇರುವ ಪ್ರದೇಶವನ್ನು ಸಮತಟ್ಟಾಗಿ ಮಾಡಿಕೊಂಡು ಹೊಲಗಳಾಗಿ ಪರಿವರ್ತನೆ ಮಾಡಿಕೊಂಡು ಬೆಳೆ ತೆಗೆಯುತ್ತಿದ್ದಾರೆ. ಇನ್ನು ಕೆಲವರು ಗುಡಿಸಲು ನಿರ್ಮಿಸಿದ್ದು, ತಮ್ಮದೇ ಸ್ಥಳ ಎಂದು ಬಿಂಬಿಸುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿಯೊಬ್ಬರು ತಿಳಿಸಿದರು.

ADVERTISEMENT

‘ಜಮಖಂಡಿ ತಾಲ್ಲೂಕಿನಲ್ಲಿ ಸರ್ಕಾರದ ದೊಡ್ಡ ಜಾಗ ಯಾವುದೂ ಇಲ್ಲ. ಬಾಗಲಕೋಟ ವಿಶ್ವವಿದ್ಯಾಲಯ ಸೇರಿದಂತೆ ಯಾವ ಸಂಸ್ಥೆಗಳಿಗೂ ನೀಡಲು ಸರ್ಕಾರದ ಸ್ಥಳವಿಲ್ಲ. ಕೊಣ್ಣೂರ ಗ್ರಾಮದ ಸ್ಥಳ ಒತ್ತುವರಿ ತೆರವುಗೊಳಿಸಿ ವಿಶ್ವವಿದ್ಯಾಲಯ ಸ್ಥಳಾಂತರ, ಕೆರೆ ನಿರ್ಮಾಣ ಸೇರಿದಂತೆ ಸರ್ಕಾರದ ದೊಡ್ಡ ಯೋಜನೆಗಳನ್ನು ತಂದರೆ ಈ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಬಹುದು’ ಎಂಬ ಸಲಹೆಯೂ ಕೇಳಿಬಂದಿದೆ.

‘ಗೋಮಾಳ ಜಾಗವನ್ನು ಕೆಲವು ಪ್ರಭಾವಿಗಳು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಕೊಣ್ಣೂರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗದಿಗೆಪ್ಪ ಧಾರವಾಡ ಒತ್ತಾಯಿಸಿದ್ದಾರೆ.

ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಸರ್ಕಾರದ ಗೋಮಾಳ ಜಾಗದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ
ಗೋಮಾಳದ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಒಂದು ವಾರದಲ್ಲಿ ಒತ್ತುವರಿ ತೆರವು ಮಾಡಿ ಸ್ವಾಧೀನ ಪಡಿಸಿಕೊಳ್ಳಲು ಜಮಖಂಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದೆ
ಅಶೋಕ ತೇಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.