ಗುಳೇದಗುಡ್ಡ: ಪಟ್ಟಣದ ಕಮತಗಿ ರಸ್ತೆಗೆ ಹೊಂದಿಕೊಂಡ ವಾರ್ಡ್ ನಂ.6ರಲ್ಲಿ ಇರುವ ಆಶ್ರಯ ಕಾಲೊನಿ (ತಾಯಮ್ಮ ದೇವಿ ನಗರ) ಮೂಲಸೌಲಭ್ಯಗಳಿಂತ ವಂಚಿತಗೊಂಡಿದ್ದು, ರಸ್ತೆ, ಶೌಚಾಲಯ, ವಿದ್ಯುತ್ ದೀಪ, ಕುಡಿಯುವ ನೀರು ಮುಂತಾದ ಸಮಸ್ಯೆಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.
1995ರಲ್ಲಿ ಮನೆಗಳಿಲ್ಲದ ನಿರಾಶ್ರಿತರಿಗೆ ಆಶ್ರಯ ಪ್ಲಾಟ್, ನಿವೇಶನ ನೀಡಿ ಜೊತೆಗೆ ಅನುದಾನದಿಂದ ಮನೆ ಕಟ್ಟಿಸಿ ಕೊಡಲಾಯಿತು. ಆರಂಭದಲ್ಲಿ 10 ಮನೆಗಳು ನಿರ್ಮಾಣವಾದವು, ಇಂದು 80ಕ್ಕೂ ಹೆಚ್ಚು ಮನೆಗಳು ಈ ಕಾಲೊನಿಯಲ್ಲಿವೆ.
ಇಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಬೇಕೆಂದರೆ ಚರಂಡಿ ವ್ಯವಸ್ಥೆಯೂ ಇಲ್ಲ. ಮಹಿಳೆಯರು, ಪುರುಷರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಜನಪ್ರತಿನಿಧಿಗಳು ಗಮನಿಸುತ್ತಿಲ್ಲ ಎಂಬುದು ಅಲ್ಲಿನ ನಿವಾಸಿಗಳ ದೂರು.
ಉತ್ತಮ ರಸ್ತೆಗಳಿಲ್ಲ: ನಿಯಮಾನುಸಾರ ಉತ್ತಮ ರಸ್ತೆಗಳಿಲ್ಲ ಎರಡು ಕಡೆ ರಸ್ತೆ ಮಾಡಿದ್ದರೂ ಅದು ಕಳಪೆಯಾಗಿ ಕಿತ್ತು ಹೋಗಿದೆ. ಉತ್ತಮ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಅಲ್ಲಿನ ನಿವಾಸಿಗಳಾದ ಅಂದಾನಪ್ಪ ಬಳವಾಡದ, ಮಲ್ಲೇಶಪ್ಪ ಕೊಣ್ಣೂರ, ನೀಲಪ್ಪ ಗೌಡರ ಆಗ್ರಹಿಸಿದರು.
ಒಂದು ಮಗು ಒಂದು ಶಾಲೆ: ಇಲ್ಲಿಯ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಸೌಲಭ್ಯಗಳಿಂದ ವಂಚಿತವಾಗಿರುವುರಿಂದ ಇಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗೂ ಇಡೀ ಶಾಲೆಗೆ ಒಬ್ಬಳೇ ಶಿಕ್ಷಕಿಯನ್ನು ನಿಯೋಜಿಸಲಾಗಿದೆ.
ಅವರೂ ಸಭೆ, ಸಮಾರಂಭ, ಬ್ಯಾಂಕ್ ಇತರೆ ಕೆಲಸಕ್ಕಾಗಿ ಶಾಲೆಗೆ ಬೀಗ ಹಾಕಿಕೊಂಡು ಹೋಗುವುದರಿಂದ ಶಾಲೆಗೆ ವಿದ್ಯಾರ್ಥಿಗಳ ಕೊರತೆಯಾಗಿದೆ. 3 ವರ್ಷಗಳಿಂದ ಒಂದು ಮಗು, ಒಬ್ಬಳು ಶಿಕ್ಷಕಿ,ಒಂದು ಶಾಲೆ ಎಂಬಂತಾಗಿದೆ. ಅಂಗನವಾಡಿಯ ಸ್ಥಿತಿಯೂ ಇದೇ ರೀತಿಯಾಗಿದೆ.
ರೋಗಗಳ ತಾಣ: ಮಳೆಯಾದರೆ ಗುಡ್ಡದ ನೀರು ಭೂಮಿಗೆ ಬಿದ್ದು ನಂತರ ರಸ್ತೆ ಬದಿ ಬಂದು ಕಾಲೊನಿ ಸೇರುತ್ತದೆ. ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುವ ನೀರಿನಿಂದ ಸೊಳ್ಳೆಗಳು ಉತ್ಪಾದನೆಯಾಗಿ ಹಲವು ರೋಗಗಳಿಗೆ ಕಾರಣವಾಗಿದೆ. ಕಾಲೊನಿಯಲ್ಲಿ ನೀರಿಗಾಗಿ 3 ತಿಂಗಳ ಹಿಂದೆಯೇ ಸಿಸ್ಟನ್ ನಿರ್ಮಾಣ ಮಾಡಿದ್ದು ಇದುವರೆಗೂ ಅಲ್ಲಿ ನೀರು ಬಂದಿಲ್ಲ.
ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ₹10 ಲಕ್ಷ ಅನುದಾನ ನೀಡಿದ್ದಾರೆ. ಕೆಲಸ ಪ್ರಗತಿಯಲ್ಲಿದೆ ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇವೆಯಲ್ಲವ್ವ ನಾಗಪ್ಪ, ಗೌಡರ ಪುರಸಭೆ ಸದಸ್ಯೆವಾರ್ಡ್ ನಂ.6 ಗುಳೇದಗುಡ್ಡ
ಆಶ್ರಯ ಕಾಲೊನಿ (ತಾಯಮ್ಮ ದೇವಿ ನಗರ) ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದುಎ.ಎಚ್.ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.