ಗುಳೇದಗುಡ್ಡ: ಪಿತ್ರಾರ್ಜಿತ 1 ಎಕರೆ 35 ಗುಂಟೆ ಜಮೀನಿನಲ್ಲಿ ಸಾವಯವ ಸಮಗ್ರ ಕೃಷಿ ಮಾಡುತ್ತಿರುವ ತಾಲ್ಲೂಕಿನ ಇಂಜಿನವಾರಿ ಗ್ರಾಮದ ರೈತ ತಿಪ್ಪಣ್ಣ ಗೌಡರ ತಾಲ್ಲೂಕಿನಲ್ಲಿಯೇ ಮಾದರಿ ಕೃಷಿಕ ಎನಿಸಿದ್ದಾರೆ.
ಇವರು ಬೆಳೆಗಳನ್ನು ಬೆಳೆಯುವಲ್ಲಿ ಭಿನ್ನ ಕ್ರಮ ಅನುಸರಿಸಿ ಹೆಚ್ಚು ಇಳುವರಿ ಪಡೆದು ಉತ್ತಮ ಲಾಭ ಪಡೆಯುತ್ತಿದ್ದಾರೆ. ಕಡಿಮೆ ಜಮೀನಿನಲ್ಲಿ ಒಂದು ಬೋರ್‌ವೆಲ್ ಅನ್ನು ಕೊರೆಸಿದ್ದಾರೆ. ತೋಟಗಾರಿಗೆ ಬೆಳೆಯಾಗಿ ಪೇರು, ಲಿಂಬೆ, ಚಿಕ್ಕು, ಮಾವು, ಸೀಬೆ, ನುಗ್ಗೆ, ಕರಿಬೇವು ಬೆಳೆದಿದ್ದಾರೆ. ಹೊಲದ ಬದುವಿನಲ್ಲಿ 120ಕ್ಕೂ ಹೆಚ್ಚು ತೆಂಗಿನ ಮರ, 200 ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ. ಜೇನು ಕೃಷಿಯನ್ನೂ ಮಾಡುತ್ತಿದ್ದಾರೆ.
ಭಿನ್ನ ಮಾದರಿ: 20 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬೆಳೆಯುತ್ತಿದ್ದಾರೆ. 210 ಕಂಬಗಳನ್ನು ನೆಡಲಾಗಿದೆ. ಒಂದು ಕಂಬಕ್ಕೆ 4 ಸಸಿಗಳಂತೆ 800 ಸಸಿಗಳನ್ನು ನೆಟ್ಟಿದ್ದಾರೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಈ ಗಿಡ ಹಳದಿ ಬಣ್ಣಕ್ಕೆ ತಿರುಗಿ ಒಣಗಿ ಹೋಗುವ ಸಾಧ್ಯತೆ ಇರುತ್ತದೆ. ಇಳುವರಿ ಬರದೇ ಇರುವ ಸಾದ್ಯತೆ ಇದೆ. ಇದನ್ನು ತಡೆಯಲು ಕಂಬಗಳ ನಡುವೆ ಅರ್ಧ ಇಂಚಿನ ಪೈಪ್ ಬಳಸಿ ಪ್ರತಿ ಗಿಡದ ಮೇಲಿನ ಮಧ್ಯ ಭಾಗಕ್ಕೆ ಸಣ್ಣ ಸ್ಪ್ರಿಂಕ್ಲರ್ ಜೆಟ್ ಅಳವಡಿಸಿ ವಾರಕ್ಕೆರಡು ಬಾರಿ ಇಲ್ಲವೇ ಒಂದು ಬರಿ ಸಸಿಗಳ ಮೇಲೆ ನೀರನ್ನು ಸಮ ಪ್ರಮಾಣದಲ್ಲಿ ಹರಿಸಲಾಗುತ್ತದೆ. ಇದರಿಂದ ಬೇಸಿಗೆಯಲ್ಲೂ ತಂಪಾಗಿರುವಂತೆ ಮಾಡಿದ್ದಾರೆ. ಇದರಿಂದ ಗಿಡಗಳಿಗೆ ಬಿಸಿಲಿನ ತಾಪ ಕಡಿಮೆಯಾಗಿ ಹಳದಿ ಬಣ್ಣ ಬರುವುದಿಲ್ಲ. ಒಣಗದೇ ಉತ್ತಮ ಇಳುವರಿ ಪಡೆಯಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಫಸಲು ಪಡೆಯುತ್ತಿದ್ದಾರೆ.
ಸಾವಯವ ಗೊಬ್ಬರ ಮತ್ತು ಔಷಧ: ಸ್ವತಃ ಸಾವಯವ ಗೊಬ್ಬರ ತಯಾರಿಸುವ ಇವರು ತಮ್ಮ ಅಗತ್ಯಕ್ಕನುಸಾರ ಬಳಸಿ ಮಿಕ್ಕಿದ್ದನ್ನು ಮಾರಿ ಲಾಭ ಗಳಿಸುತ್ತಿದ್ದಾರೆ. ಔಷಧ ರೂಪವಾಗಿ ಗೋ-ಕೃಪಾಮೃತ, ಎರೆಜಲ, ಟ್ರೈಕೊಡರ್ಮಾ, ಎನ್.ಪಿ.ಕೆ-ಡಿಕೆಸಿ ತಯಾರಿಸಿ ಸಿಂಪರಣೆ ಮಾಡಿ ಉತ್ತಮ ಬೆಳೆ, ಬೆಳೆದು ಅದರ ಲಾಭವನ್ನೂ ಪಡೆಯುತ್ತಿದ್ದಾರೆ.
ಕುಟುಂಬ ಹಾಗೂ ಸಮಾಜದ ಆರೋಗ್ಯ ಉತ್ತಮವಾಗಿ ಇರಬೇಕೆಂಬ ಉದ್ದೇಶದಿಂದ ಸಾವಯವ ಗೊಬ್ಬರ ಮತ್ತು ಸಾವಯವ ಔಷಧ ತಯಾರಿಸಿ ಸಿಂಪಡಿಸುವ ಮೂಲಕ ರಾಸಾಯನಿಕ ಮುಕ್ತ ಬೆಳೆ ಬೆಳೆಯುತ್ತಿದ್ದೇನೆತಿಪ್ಪಣ್ಣ ಗೌಡರ, ಕೃಷಿಕ ಇಂಜಿನವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.