ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದ ರಸ್ತೆಗಳಲ್ಲಿ ಸದಾ ನೀರು ಹರಿಯುತ್ತಿದ್ದು, ಸಿಸಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನೀರು ಹರಿಯುತ್ತಿರುವುದರಿಂದ ರಸ್ತೆಯ ಮೇಲೆ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿದೆ.
ಪಟ್ಟಣದಲ್ಲಿ ಚೌಬಜಾರ, ಸರಾಫ್ ಬಜಾರ, ನಡುವಿನ ಪೇಟೆಯ ಮುಖ್ಯ ರಸ್ತೆ, ಭಂಡಾರಿ ಕಾಲೇಜು ರಸ್ತೆಗಳಲ್ಲಿ ಮುಖ್ಯ ರಸ್ತೆ ಇದ್ದರೂ ಪಾದಚಾರಿ ರಸ್ತೆಗಳಿಲ್ಲ. ಹೀಗಾಗಿ ವಾಹನ ದಟ್ಟಣೆಯಾದಾಗ ರಸ್ತೆಯ ಮೇಲೆ ನಡೆಯಲು ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿರುತ್ತದೆ.
ಪ್ರತಿ ಎರಡು ಮೂರು ದಿನಗಳಿಗೊಮ್ಮೆ ಪುರಸಭೆಯವರು ಕುಡಿಯಲು ನೀರು ಬಿಡುತ್ತಾರೆ. ಆದರೆ ಸಾರ್ವಜನಿಕರು ನೀರು ತುಂಬಿಸಿಕೊಂಡ ನಂತರ ನಲ್ಲಿಗಳ ಮೂಲಕ ನೀರನ್ನು ರಸ್ತೆಗೆ ಹರಿ ಬಿಡುತ್ತಾರೆ. ರಸ್ತೆಯ ಮೇಲೆ ನೀರು ಹರಿಯುವುದರಿಂದ ರಸ್ತೆ ಹಾಳಾಗುವುದಷ್ಟೇ ಅಲ್ಲದೇ ನಡೆದಾಡುವುದೂ ಕಷ್ಟವಾಗಿದೆ.
ಜಾಗೃತಿಯ ಕೊರತೆ : ಪುರಸಭೆಯವರು ನೀರಿನ ಮಹತ್ವದ ಕುರಿತು ಮತ್ತು ನೀರನ್ನು ರಸ್ತೆ ಮೇಲೆ ಬಿಟ್ಟರೆ ಸಾರ್ವಜನಿಕರಿಗೆ ಆಗುವ ತೊಂದರೆ ಮುಂತಾದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ವಿಫಲರಾಗಿರುವುದರಿಂದ ಸಾಮಾನ್ಯವಾಗಿ ಪಟ್ಟಣದ ಎಲ್ಲ ರಸ್ತೆಗಳಲ್ಲಿ ನೀರು ವೃಥಾಹರಿಯುತ್ತಿರುವುದು ಕಂಡು ಬರುತ್ತಿದೆ.
ಶಿಸ್ತು ಕ್ರಮ ಇಲ್ಲದಿರುವುದು: ಪುರಸಭೆಯಿಂದ ನೀರು ರಸ್ತೆಗೆ ಬಿಡುವವರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸದೇ ಇರುವುದರಿಂದ ಸಾರ್ವಜನಿಕರಿಗೆ ಭಯ ಇಲ್ಲವಾಗಿದೆ. ಹೀಗಾಗಿ ನಲ್ಲಿ ನೀರನ್ನು ಯತೇಚ್ಛವಾಗಿ ಪೋಲು ಮಾಡಲಾಗುತ್ತಿದೆ.
ನಲ್ಲಿಗೆ ಕೀಲಿ ಹಾಕಿದ ಪುರಸಭೆ ಸಿಬ್ಬಂದಿ: ಈಚೆಗೆ ಪುರಸಭೆಯವರು ಕೆಲವು ವಾರ್ಡ್‌ಗಳಲ್ಲಿ ರಸ್ತೆಗೆ ನೀರು ಬಿಡುವವರಿಗೆ ತಿಳಿಸಿ ಹೇಳಿ ನಲ್ಲಿಗಳಿಗೆ ಕೀಲಿ ಹಾಕಿದ್ದಾರೆ.ಆದರೆ ಪ್ರಯೋಜನವಾಗಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದು ನಿರಂತರವಾಗಿರದೇ ಇರುವುದರಿಂದ ಸಮಸ್ಯೆ ಮುಂದುವರಿದಿದೆ.
ಹಾಳಾದ ರಸ್ತೆಗಳು: ಸತತವಾಗಿ ರಸ್ತೆ ಮೇಲೆ ನೀರು ಹರಿಯುವುದರಿಂದ ಪಟ್ಟಣದಲ್ಲಿ ಈ ಹಿಂದೆ ನಿರ್ಮಾಣ ಮಾಡಿದ ರಸ್ತೆಗಳು ಹಾಳಾಗಿವೆ. 24X7 ನೀರು ಒದಗಿಸಲು ರಸ್ತೆ ಅಗೆದು ಅದನ್ನು ಸರಿಯಾಗಿ ಮುಚ್ಚದೆ ಇರುವುದರಿಂದಲೂ ರಸ್ತೆ ಹಾಳಾಗಿದೆ. ಅನವಶ್ಯಕವಾಗಿ ರಸ್ತೆಯ ಮೇಲೆ ನೀರು ಪೋಲಾಗುವುದರೊಂದಿಗೆ ಹಲವು ಸಮಸ್ಯೆಗಳು ಉದ್ಭವಿಸಿವೆ.
‘ಗುಳೇದಗುಡ್ಡ ಪಟ್ಟಣದಲ್ಲಿ ದಿನವೊಂದಕ್ಕೆ ಅಂದಾಜು 10 ಸಾವಿರ ಲೀಟರ್ ನೀರು ಪೋಲಾಗುತ್ತಿದೆ. ಪುರಸಭೆಯವರು ತಡೆಗಟ್ಟುವ ಕಟ್ಟುನಿಟ್ಟಾದ ಕ್ರಮ ಅಳವಡಿಸಿಕೊಳ್ಳಬೇಕು. ನಾವು ಶಿಸ್ತು ಕ್ರಮದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ನೇಕಾರ ಮುಖಂಡ ಅಶೋಕ ಹೆಗಡೆ ತಿಳಿಸಿದರು.
ನಮ್ಮ ಎಲ್ಲ ಸಿಬ್ಬಂದಿ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಜಾಗೃತಿ ಮೂಡಿಸಿ ಹಲವು ನಲ್ಲಿಗಳಿಗೆ ಕೀಲಿ ಹಾಕಲಾಗಿದೆ. ಸಾರ್ವಜನಿಕರು ನೀರಿನ ಮಹತ್ವ ಅರಿಯಬೇಕಿದೆಎ.ಎಚ್. ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.