ADVERTISEMENT

ಆರು ಬಾರಿ ಸರ್ಕಾರಿ ನೌಕರಿ ಗರಿ: ಇಳಕಲ್‌ನ ಸೀಮಾ ಈಗ ವಾಣಿಜ್ಯ ತೆರಿಗೆ ಅಧಿಕಾರಿ

ಕಠಿಣ ಪರಿಶ್ರಮದಿಂದ ಗುರಿ ಸೇರಿದರು ಸೀಮಾ

ವೆಂಕಟೇಶ್ ಜಿ.ಎಚ್
Published 30 ಸೆಪ್ಟೆಂಬರ್ 2018, 7:02 IST
Last Updated 30 ಸೆಪ್ಟೆಂಬರ್ 2018, 7:02 IST
   

ಬಾಗಲಕೋಟೆ: ‘ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವಾಗ ಋಣಾತ್ಮಕ ಚಿಂತನೆಗಳಿಗೆ ಅವಕಾಶ ನೀಡಬೇಡಿ. ಸರ್ಕಾರಿ ನೌಕರಿ ಕಬ್ಬಿಣದ ಕಡಲೆಯಲ್ಲ. ನಿರಂತರ ಪರಿಶ್ರಮ ಖಂಡಿತ ಗುರಿ ಮುಟ್ಟಿಸುತ್ತದೆ’ ಎನ್ನುವುದು ವಾಣಿಜ್ಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್ಸೀಮಾ ಬಿ.ಬಾಬು ಹೇಳುವ ಕಿವಿಮಾತು.

ಸರ್ಕಾರಿ ನೌಕರಿ ಎಂದರೆ ಅದೊಂದು ದೂರದ ಬೆಟ್ಟ. ಅದು ನಮಗಲ್ಲ. ದುಡ್ಡು, ವಶೀಲಿ (ಪ್ರಭಾವ) ಇದ್ದವರಿಗೆ ಎಂಬ ಭಾವ ಜನಜನಿತ. ಆದರೆ ಅದಕ್ಕೆಲ್ಲಾ ಅಪವಾದವೆಂಬಂತೆ ಇಳಕಲ್‌ ನಗರದ ಸೀಮಾ ಬಿ. ಬಾಬು ಅವರಿಗೆ ಕಳೆದ ಎಂಟು ವರ್ಷಗಳಲ್ಲಿ ಒಂದಲ್ಲಾ ಎರಡಲ್ಲಾ ಆರು ಬಾರಿ ಸರ್ಕಾರಿ ನೌಕರಿ ಒಲಿದಿದೆ. ವಿಶೇಷವೆಂದರೆ ಸೀಮಾ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದರು.

ಇಳಕಲ್‌ನ ಹಿರಿಯ ಪತ್ರಕರ್ತ ಬಿ.ಬಾಬು ಹಾಗೂ ಮಾಲಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಸೀಮಾ ಎರಡನೆಯವರು. ಎಂ.ಕಾಂ ಪೂರ್ಣಗೊಳಿಸಿದ್ದಾರೆ. ಸದ್ಯ ಬಾಗಲಕೋಟೆಯ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ನಿರೀಕ್ಷಕಿ (ಕಮರ್ಷಿಯಲ್ ಟ್ಯಾಕ್ಸ್ ಇನ್‌ಸ್ಪೆಕ್ಟರ್) ಆಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

2010ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೀಮಾ ಆಯ್ಕೆಯಾಗಿ, ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಹಾಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲಸ ಮಾಡಿದ್ದಾರೆ. 2012ರಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ (ಎಫ್‌ಡಿಎ) ನೇಮಕಗೊಂಡಿದ್ದರು. ಊರು ದೂರ ಎಂಬ ಕಾರಣದಿಂದ ಹಿರಿಯರು ಅವರನ್ನು ಕೆಲಸಕ್ಕೆ ಕಳಿಸಿರಲಿಲ್ಲ.

ಆದರೆ 2015ರಲ್ಲಿ ಮತ್ತೊಮ್ಮೆ ಎಫ್‌ಡಿಎ ಪರೀಕ್ಷೆ ಬರೆದು ಬಾಗಲಕೋಟೆಯ ಕೆ.ಜಿ.ಐ.ಡಿ ಕಚೇರಿಗೆ ನೇಮಕಗೊಂಡಿದ್ದರು. ಮುಂದೆ ಕಂದಾಯ ನಿರೀಕ್ಷಕಿ, ರಾಜ್ಯ ಲೆಕ್ಕ ಶಾಖೆ (ಸ್ಟೇಟ್ ಅಕೌಂಟ್ಸ್) ಅಕೌಂಟ್ ಅಸಿಸ್ಟೆಂಟ್ ಆಗಿ ಆಯ್ಕೆಯಾಗಿದ್ದರು. ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ವಾಣಿಜ್ಯ ತೆರಿಗೆ ಇಲಾಖೆಗೆ ನೇಮಕಗೊಂಡು ಇದೀಗ ಬೆಳಗಾವಿಯಲ್ಲಿ ಆರು ತಿಂಗಳ ತರಬೇತಿ ಪೂರ್ಣಗೊಳಿಸಿ ಬಂದಿದ್ದಾರೆ.

ಎಂಜಿನಿಯರ್ ಆಗಬೇಕೆಂದಿದ್ದೆ:ಇಳಕಲ್‌ನ ಜೇಸಿ ಶಾಲೆ ವಿದ್ಯಾರ್ಥಿನಿಯಾದ ಸೀಮಾ, ಮೊದಲಿನಿಂದಲೂ ಓದಿನಲ್ಲಿ ಚುರುಕಾಗಿದ್ದರು.

‘ಪುಸ್ತಕ ಓದುವ ಹವ್ಯಾಸ ಅಪ್ಪನಿಂದಲೇ ಬಳುವಳಿಯಾಗಿ ಬಂದಿತ್ತು. ಹಾಗಾಗಿ ಶಾಲೆಯ ವಿಷಯದ ಜೊತೆಗೆ ಸಾಮಾನ್ಯ ಜ್ಞಾನದಲ್ಲಿ ಚುರುಕಾಗಿದ್ದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 85ರಷ್ಟು ಅಂಕ ಬಂದಿತ್ತು. ಪಿಯುಸಿ ವಿಜ್ಞಾನ ವಿಷಯ ಆಯ್ದುಕೊಂಡಿದ್ದೆ. ಪರೀಕ್ಷೆ ವೇಳೆ ಅಪ್ಪ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೈಕೆಯಲ್ಲಿ ತೊಡಗಿದ್ದರಿಂದ ಸರಿಯಾಗಿ ಓದಲು ಆಗಲಿಲ್ಲ. ಗಣಿತದಲ್ಲಿ ಫೇಲ್ ಆಗಿದ್ದೆ ಹಾಗಾಗಿ ಎಂಜಿನಿಯರ್ ಆಗುವ ಕನಸು ಕೈಗೂಡಲಿಲ್ಲ’ ಎಂದು ಸೀಮಾ ಹೇಳುತ್ತಾರೆ.

ಮರು ಅವಕಾಶದಲ್ಲಿ ಶೇ 55 ಅಂಕಗಳೊಂದಿಗೆ ಪಿಯುಸಿ ಮುಗಿಸಿ ಬಿಕಾಂ ಆಯ್ದುಕೊಂಡಿದ್ದಾರೆ. ಪದವಿ ತರಗತಿಯ ಎರಡನೇ ವರ್ಷದಲ್ಲಿದ್ದಾಗಲೇ ಎಸ್‌ಡಿಎ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮುಂದೆ ಬಾಹ್ಯವಾಗಿ ಎಂ.ಕಾಂ ಮುಗಿಸಿದ್ದಾರೆ. ’2011ರಲ್ಲಿ ಕೆಎಎಸ್ ಪ್ರಿಲಿಮ್ಸ್ ಆಗಿದ್ದು, ಮುಖ್ಯ ಪರೀಕ್ಷೆಗೆ ತರಬೇತಿ ಪಡೆಯಲು ಮನೆಯಲ್ಲಿ ಅನುಕೂಲ ಇರಲಿಲ್ಲ. ಮುಂದಿನ ದಿನಗಳಲ್ಲಿ ಅದಕ್ಕೂ ಪ್ರಯತ್ನ ಮಾಡುತ್ತೇನೆ’ ಎನ್ನುತ್ತಾರೆ.

’ಈ ಸಾಧನೆ ಕೇಳಿ ಬಹುತೇಕರು ಅದು ನಿನ್ನ ಅದೃಷ್ಟ (ಲಕ್) ಎಂದು ಹೇಳುತ್ತಾರೆ. ಅದು ಸರಿಯಲ್ಲ. ಇಲ್ಲಿ ಅದೃಷ್ಟ ಮಾತ್ರವಲ್ಲ, ಪರಿಶ್ರಮವೂ ಇದೆ. ನಿರಂತರ ಓದು, ಯೋಜನಾಬದ್ಧ ಪ್ರಯತ್ನ ಯಶಸ್ಸಿಗೆ ಮೆಟ್ಟಿಲು’ ಎಂಬುದು ಸೀಮಾ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.