ಹುನಗುಂದ: ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಹಾಗೂ ಬುಧವಾರ ಗುಡುಗು ಸಿಡಿಲುಗಳೊಂದಿಗೆ ಭಾರಿ ಮಳೆಯಾಗಿದೆ. ಮಳೆಗೆ ಕೆಲವು ಅವಾಂತರ ಕೂಡಾ ಉಂಟಾಗಿದೆ.
ತಾಲ್ಲೂಕಿನ ಚಿತ್ತಾವಾಡಗಿಯಲ್ಲಿ ಜೋರು ಮಳೆ ಸುರಿದ ಪರಿಣಾಮ ಗ್ರಾಮದ ರೈತ ಆದನಗೌಡ ಗೌಡರ ಅವರ ಮನೆಗೆ ಚರಂಡಿ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ ದನದ ಕೊಟ್ಟಿಗೆಯಲ್ಲಿನ ಮೇವು ಮತ್ತು ಹೊಟ್ಟು ನೀರು ಪಾಲಾಗಿದ್ದು, ನಿಂತ ನೀರನ್ನು ಹೊರ ಹಾಕಲು ಕುಟುಂಬದವರು ಹರಸಾಹಸ ಪಡಬೇಕಾಯಿತು.
‘ಚರಂಡಿ ದುರಸ್ಥಿ ಮಾಡುವಂತೆ ಹಿರೇಬಾದವಾಡಗಿ ಪಿಡಿಒ ಅವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಇತ್ತಕಡೆ ಗಮನ ಹರಿಸುತ್ತಿಲ್ಲ’ ಎಂದು ಕುಟುಂಬದ ಗದ್ದನಗೌಡ ಗೌಡರ ಆಕ್ರೋಶ ವ್ಯಕ್ತಪಡಿಸಿದರು
ಮಳೆ ಆರ್ಭಟಕ್ಕೆ ಪಟ್ಟಣದಲ್ಲಿ ಹರಿಯುವ ಹಿರೇಹಳ್ಳಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.
ಹಿರೇಹಳ್ಳದಲ್ಲಿ ನೀರಿನ ಒತ್ತಡ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ 50ರ ಕೆಳ ಸೇತುವೆ (ಅಂಡರ್ ಪಾಸ್) ಯಲ್ಲಿ 2 ರಿಂದ 3 ಅಡಿ ನೀರು ನಿಂತ ಪರಿಣಾಮ ಹುನಗುಂದದಿಂದ ಕರಡಿಗೆ ಹೋಗುವ ಮಾರ್ಗದ ಸಂಚಾರ ಸ್ಥಗಿತಗೊಂಡಿತು. ಬಸ್ ಸೇರಿದಂತೆ ದೊಡ್ಡ ವಾಹನಗಳು ಸುತ್ತಿ ಬಳಸಿ ಸಂಚಾರಿಸಬೇಕಾಗಿದೆ. ಕೃಷಿ ಮಾರುಕಟ್ಟೆ ಹೋಗುವ ರೈತರು ಪರದಾಡುವಂತಾಗಿದೆ.
ತಾಲ್ಲೂಕಿನ ಬೇಕಮಲದಿನ್ನಿ ಗ್ರಾಮದ ಹತ್ತಿರ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಪಟ್ಟಣದಿಂದ ಕರಡಿ ಗ್ರಾಮಕ್ಕೆ ಹೋಗುವ ಇನ್ನೊಂದು ಮಾರ್ಗವು ಸಹ ಸುಮಾರು ಮಧ್ಯಾಹ್ನದವರೆಗೆ ಬಸ್‌ಗಳು ಸಂಚರಿಸಲು ಸಾಧ್ಯವಾಗಿಲ್ಲ. ಬೆಳಿಗ್ಗೆ ಬಸ್‌ಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗದೆ ಮರಳಿ ಮನೆಗೆ ಹೋಗುವಂತಾಯಿತು.
ಮಳೆ ಆರ್ಭಟಕ್ಕೆ ತಾಲ್ಲೂಕಿನ ಹಳ್ಳ-ಕೊಳ್ಳಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿನ ನೀರು ನಿಂತಿದ್ದು, ಕೆಲವಡೆ ಹೆಸರು ಬೆಳೆ ಕಟಾವಿಗೆ ಪರದಾಡುವಂತಾಗಿದೆ.
ಬಾದಾಮಿ ಸುತ್ತಮುತ್ತ ಬಿರುಸಿನ ಮಳೆ
ಬಾದಾಮಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸುತ್ತ ಮುತ್ತ ಬುಧವಾರ ಬೆಳಿಗ್ಗೆ ಗುಡುಗು ಸಿಡಿಲಿನ ಆರ್ಭಟದಿಂದ ಗಂಟೆಕಾಲ ಬಿರುಸಿನ ಮಳೆ ಸುರಿದಿದೆ.
ಮುಂಗಾರು ಹಂಗಾಮಿನ ರಭಸದ ಆಶ್ಲೇಷ ಮಳೆಯಿಂದ ಬಾದಾಮಿ ಬೆಟ್ಟದ ಮೇಲಿರುವ ಜೋಡಿ ಜಲಧಾರೆಗಳು ಬೆಳಗಿನ ವರೆಗೂ ಧುಮ್ಮಿಕ್ಕಿದವು.
ಬಿ.ಎನ್. ಜಾಲಿಹಾಳ ಗ್ರಾಮದ ಸಮೀಪದ ಹುಲಿಗೆಮ್ಮನ ಕೊಳ್ಳದ ಬೆಟ್ಟದ ಮೇಲಿಂದ ಜಲಧಾರೆ ಧುಮ್ಮಿಕ್ಕಿ ಪ್ರವಾಸಿಗರನ್ನು ಆಕರ್ಷಿಸಿದವು. ಮುಂಗಾರು ಹಂಗಾಮಿನ ತೊಗರಿ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಮತ್ತು ಕಬ್ಬು ಬೆಳೆಗೆ ಅನುಕೂಲವಾಗಿದೆ. ಹೆಸರು ಬೆಳೆ ಕೊಯ್ಲಿಗೆ ಬಂದಿದ್ದು ರೈತರಿಗೆ ಚಿಂತೆಯಾಗಿದೆ.
ಹೀಗೆಯೆ ಮಳೆಯು ಮುಂದುವರೆದರೆ ಹೆಸರು ಬೆಳೆ ರೈತರ ಕೈಗೆ ಸಿಗುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ರೈತರು ಆತಂಕದಲ್ಲಿದ್ದಾರೆ.
‘ಮೊದಲು ಬಿತ್ತನೆಯಾದ ಹೆಸರು ಬೆಳೆ ಕೊಯ್ಲಿಗೆ ಬಂದಿದ್ದು. ಮಳೆ ಮುಂದುವರೆದರೆ ಹೆಸರು ಬೆಳೆ ರೈತರಿಗೆ ಬಾರದಂತಾಗುವುದು. ಮಳೆ ವಿಶ್ರಾಂತಿ ನೀಡಿದರೆ ರೈತರು ಹೆಸರು ಬೆಳೆಯನ್ನು ಕೊಯ್ಲು ಮಾಡುವರು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ತಿರಕಣ್ಣವರ ಪ್ರತಿಕ್ರಿಯಿಸಿದರು.
ತುಂಬಿದ ಕೆರೆ ಬಾಂದಾರಗಳು
ರಬಕವಿ ಬನಹಟ್ಟಿ: ಘಟಪ್ರಭಾ ಎಡದಂತೆ ಕಾಲುವೆ ಮೂಲಕ ಬನಹಟ್ಟಿಯ ಕೆರೆಗೆ ನೀರು ಬಿಡಲಾಗಿದೆ. ನಂತರ ಕೆರೆ ತುಂಬಿದ್ದು ಹೆಚ್ಚುವರಿ ನೀರು ಹಳ್ಳಕ್ಕೆ ಹರಿಯುತ್ತಿದೆ. ಇದರಿಂದ ಹಳ್ಳಕ್ಕೆ ನಿರ್ಮಾಣ ಮಾಡಲಾದ ಬಾಂದಾರಗಳು ತುಂಬಿ ಹರಿಯುತ್ತಿವೆ. ಕೆರೆ ಮತ್ತು ಹಳ್ಳಕ್ಕೆ ನಿರ್ಮಾಣ ಮಾಡಲಾದ ಬಾಂದಾರಗಳು ತುಂಬಿರುವುದರಿಂದ ಬಾವಿ ಮತ್ತು ಕೊಳವೆಬಾವಿಗಳಲ್ಲಿಯ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಬುಧವಾರ ಬೆಳಗ್ಗೆ ಎರಡು ಗಂಟೆಗಳ ಕಾಲ ಉತ್ತಮ ಮಳೆಯಾಗಿದ್ದು ಸಂಜೆ ಮತ್ತೆ ಮಳೆಯಾಗಿದ್ದರಿಂದ ಈ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಿದೆ’ ಎನ್ನುತ್ತಾರೆ ರೈತರಾದ ದೇವರಾಜ ರಾಠಿ.
ಆಸ್ಪತ್ರೆಗೆ ನುಗ್ಗಿದ ನೀರು
ಹುನಗುಂದ: ಪಟ್ಟಣದಲ್ಲಿ ಬುಧವಾರ ನಸುಕಿನ ಜಾವ ಸುರಿದ ಮಳೆಗೆ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿನ ಎಕ್ಸ್ ರೇ ಕೊಠಡಿ ಪ್ರಯೋಗಾಲಯ ಇಂಜೆಕ್ಷನ್ ನೀಡುವ ಕೊಠಡಿ ರಕ್ತ ತಪಾಸಣೆ ಕೊಠಡಿ ಸೇರಿದಂತೆ ಇತರೆಡೆ ನೀರು ನುಗ್ಗಿದ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು ಕೆಲ ಕಾಲ ಪರದಾಡಿದರು. ನಂತರ ಆಸ್ಪತ್ರೆ ಸಿಬ್ಬಂದಿ ನಿಂತ ನೀರನ್ನು ಹೊರಹಾಕಿದರು. ಆರು ಮನೆಗಳಿಗೆ ಹಾನಿ: ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಿಗ್ಗೆ ಸುರಿದ ಮಳೆಗೆ ತಾಲ್ಲೂಕಿನ ಬಿಸಲದಿನ್ನಿ ಗ್ರಾಮದಲ್ಲಿ ಮೂರು ಹಾಗೂ ಅಮರಾವತಿಯಲ್ಲಿ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.