
ಬೀಳಗಿ: ಹಿಂದೂ ಸಮಾಜ ಏಕತೆಯಾಗಬೇಕು ಎಂಬ ಉದ್ದೇಶದಿಂದ ಸಮ್ಮೇಳನ ಆಯೋಜನೆ ಮಾಡಲಾಗಿದೆ. ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು ಎನ್ನುವ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ ತಿಳಿಸಿದರು.
ಪಟ್ಟಣದ ಸಿದ್ದೇಶ್ವರ ಕಾಲೇಜು ಮೈದಾನದಲ್ಲಿ ಹಿಂದೂ ಸಮ್ಮೇಳನ ಆಯೋಜನ ಸಮಿತಿ ವತಿಯಿಂದ ಮಂಗಳವಾರ ಸಾಯಂಕಾಲ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
'ಒಳ ಹೊರಗಿನ ಐದು ನ್ಯೂನ್ಯತೆಗಳ-ನ್ನು ಸರಿಪಡಿಸಬೇಕಾಗಿದೆ. ನಾಗರಿಕ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವುದು, ಪರಿಸರ ಸಂರಕ್ಷಣೆ, ನೀರನ್ನು ಮಿತವಾಗಿ ಬಳಸುವುದು, ಜೊತೆಗೆ ಸ್ವಭಾಷೆ, ಸ್ವದೇಶಿ ಉಡುಪು, ಸ್ವದೇಶಿ ಆಹಾರದ ಬಳಕೆ ಆಗಬೇಕು, ಸ್ವಧರ್ಮದ ಬಗ್ಗೆ ಅಭಿಮಾನವಿರಲಿ. ಅನ್ಯ ಧರ್ಮೀಯರ ವಿವಿಧ ರೀತಿಯ ದಬ್ಬಾಳಿಕೆ ತಡೆಯುವುದಕ್ಕೆ ಪ್ರಯತ್ನಿಸಬೇಕಾಗಿದೆ' ಎಂದರು.
ಕೆಸರಟ್ಟಿ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಮಾತನಾಡಿ "ಮೇಲು-ಕೀಳು ಎಂಬ ಭಾವನೆ ಮೂಡಿಸಿ ಭಾರತದಲ್ಲಿ ಸನಾತನ ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಭಗವಂತನು ಎಲ್ಲರಲ್ಲಿಯೂ ಇದ್ದಾನೆ. ಹೀಗಾಗಿ ನಾವು ಜಾತಿ ಭೇದ ಮರೆತು ಸಹೋದರರಂತೆ ಬಾಳಬೇಕು. ಮಕ್ಕಳಲ್ಲಿ ಸಮಾಜದ ಮತ್ತು ರಾಷ್ಟ್ರದ ಬಗ್ಗೆ ಅರಿವು ಮೂಡಿಸಬೇಕು. ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಉಪಯೋಗ ಮಾಡಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ,ಹಿಂದೂಪರ ಸಂಘಟನೆಯವರು ಶಕ್ತಿ ಸಾಮರ್ಥ್ಯ, ಒಗ್ಗಟ್ಟಿನಿಂದ ದೌರ್ಜನ್ಯ ತಡೆಗೆ ಪ್ರಯತ್ನಿಸಬೇಕು. ಗೋ ರಕ್ಷಣೆ, ಲವ್ ಜಿಹಾದ್ ವಿಷಯದಲ್ಲಿ ಒಟ್ಟಾಗಿ ಹೋರಾಟಕ್ಕೆ ಮುಂದಾದರೆ ಯಶಸ್ಸು ದೊರಕುವುದು' ಎಂದರು.
ಬೀಳಗಿ ಸೋಮಪ್ಪಯ್ಯನ ಮಠದ ಚೆನ್ನಬಸವ ಸ್ವಾಮೀಜಿ, ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ, ಅನ್ನಪೂರ್ಣೆಶ್ವರಿ ಬ್ರಹನ್ಮಠದ ಶಿವಾನಂದ ದೇವರು,ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಟಗೇರಿ ಇದ್ದರು.
ಬೃಹತ್ ಮೆರವಣಿಗೆ: ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಜಿಎಲ್‌ಬಿಸಿ ಹನುಮಾನ ಮಂದಿರದಿಂದ ಮುಖ್ಯ ರಸ್ತೆಯ ಮೂಲಕ ಕಾರ್ಯಕ್ರಮದ ವೇದಿಕೆಯ ಸ್ಥಳದವರೆಗೆ ಭಾರತ ಮಾತೆಯ ಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಎಲ್ಲರೂ ಕೇಸರಿ ಟವೆಲ್ ಕೊರಳಲ್ಲಿ ಹಾಕಿಕೊಂಡು ಅಂಥದ್ದೇ ಬಣ್ಣದ ಟೊಪ್ಪಿಗೆ ಉಟ್ಟುಕೊಂಡಿದ್ದರು. ಭಗವಾ ಧ್ವಜಗಳನ್ನು ಹಿಡಿದಿದ್ದರು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡೊಳ್ಳುಕುಣಿತ,ಕರಡಿ ಕುಣಿತ, ಭಜನಾ ತಂಡ, ಕೋಲಾಟ, ಲಂಬಾಣಿ ನೃತ್ಯದ ತಂಡ, ಹಲಿಗೆ ವಾದನ, ಲೇಜಿಮ್ ತಂಡಗಳು ಪಾಲ್ಗೊಂಡಿದ್ದವು.
ಮಕ್ಕಳು ವಿವಿಧ ವೇಷ ಧರಿಸಿ ಪಾಲ್ಗೊಂಡಿದ್ದರು. ಬಸವೇಶ್ವರ ವೃತ್ತ, ಶಿವಾಜಿ ವೃತ್ತ ಮತ್ತಿತರೆಡೆ ಮೆರವಣಿಗೆಯ ಮೇಲೆ ಪುಷ್ಪಗಳನ್ನು ಸುರಿಸಿ ಸ್ವಾಗತಿಸಲಾಯಿತು.ಮಾಜಿ ಸಚಿವ ಮುರುಗೇಶ ನಿರಾಣಿ,ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.