ಬಾಗಲಕೋಟೆ: ಜಿಲ್ಲೆಯ ಐಹೊಳೆ, ಬಾದಾಮಿಯಲ್ಲಿ ಹೊಟೇಲ್ ನಿರ್ಮಾಣವಾಗುತ್ತಿವೆ. ಬಾಗಲಕೋಟೆಯಲ್ಲೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವ ರೀತಿಯಲ್ಲಿ ಅತ್ಯುತ್ತಮ ಹೊಟೇಲ್ ನಿರ್ಮಿಸಲಾಗುವುದು ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯವಿರುವ ಕಡೆಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುವುದು. ನಿಗಮದ ಸಭೆ ನಡೆಸಿ, ಎಲ್ಲ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯದ ವಿಮಾನ ನಿಲ್ದಾಣಗಳ ಮೇಲ್ದರ್ಜೆಗೇರಿಸುವುದರ ಜತೆಗೆ ಬಾಗಲಕೋಟೆಯಲ್ಲಿ ಬಿಟಿಡಿಎದಿಂದ 6 ಎಕರೆ ಜಾಗೆ ಪಡೆದುಕೊಂಡು ರೆಸ್ಟೋರೆಂಟ್ ನಿರ್ಮಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿಯೂ ವಿಮಾನಗಳು ಹಾರಾಟ ಮಾಡುವ ರೀತಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. ಎಂದು ಹೇಳಿದರು.
ವಿಜಯಪುರ ವಿಮಾನ ನಿಲ್ದಾಣದ ಶೇ95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಯುಕೆಪಿ ವಿಚಾರದಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದಲ್ಲದೇ ಮೂರನೇ ಹಂತದ ಭೂಸ್ವಾಧೀನ ಪೂರ್ಣಗೊಳಿಸಲು ಬದ್ಧತೆ ಪ್ರಕಟಿಸಿದೆ. ಸಚಿವ ಸಂಪುಟದ ತೀರ್ಮಾನಗಳನ್ನು ಆದೇಶ ರೂಪದಲ್ಲೂ ಹೊರಡಿಸಿದೆ ಎಂದರು.
ಪಡಿತರ ವಿತರಣೆಯಲ್ಲಿ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದ್ದು, ಹೆಚ್ಚಿನ ಪಾರದರ್ಶಕತೆಯನ್ನು ಕಾಣಬಹುದಾಗಿದೆ. ಇದರಿಂದ ರಾಜ್ಯದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಯುಕೆಪಿ ವಿಚಾರದಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ಮುಳುಗಡೆ ಭೂಸ್ವಾಧೀನಕ್ಕೆ ಪರಿಹಾರ ಸಿಗಲಿದೆ. ಪುನರ್ವಸತಿ ವಿಷಯದಲ್ಲಿ ಸರ್ಕಾರ ಏನು ಕ್ರಮಕೈಗೊಳ್ಳಲಿದೆ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯುತ್ತೇವೆ ಎಂದರು.
ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ ದಡ್ಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಸೈಫುದ್ಧಿನ್ ಕಲಾದಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.