ADVERTISEMENT

ಸಿದ್ದರಾಮಯ್ಯನವರೇ ನೀವು ಸಮಾಜವಾದಿಯಾಗಿದ್ದರೆ ರಾಜೀನಾಮೆ ನೀಡಿ: ಶಾಸಕ ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:36 IST
Last Updated 24 ಸೆಪ್ಟೆಂಬರ್ 2024, 14:36 IST
<div class="paragraphs"><p>ಶಾಸಕ ಮಹೇಶ ಟೆಂಗಿನಕಾಯಿ</p></div>

ಶಾಸಕ ಮಹೇಶ ಟೆಂಗಿನಕಾಯಿ

   

ಬಾಗಲಕೋಟೆ: ನಿಜವಾದ ಸಮಾಜವಾದಿ ಆಗಿದ್ದರೆ, ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ಕೇಂದ್ರದ ಕೈಗೊಂಬೆಯಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಟೀಕಿಸಿದ್ದರು. ಈಗ ಹೈಕೋರ್ಟ್ ಹೇಳಿದೆ. ಈಗೇನು ಹೇಳುತ್ತಾರೆ. ರಾಜ್ಯಪಾಲರಿಗೆ ಕಿರುಕುಳ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರುದ್ಧ ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ಮಾಡಿತ್ತು. ಸದನದಲ್ಲಿ ಚರ್ಚೆಗೆ ಅವಕಾಶ ನೀಡದೇ ಫಲಾಯನ ಮಾಡಿದ್ದರು. ಈಗ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ ಎಂದು ಟೀಕಿಸಿದರು.

ರಾಜ್ಯಪಾಲರ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ್ದ ಸರ್ಕಾರಕ್ಕೆ ಮುಖಭಂಗವಾಗಿದೆ. ಮುಖ್ಯಮಂತ್ರಿ ಬೆಂಬಲಿಸುವ ಭರದಲ್ಲಿ ಸಚಿವರು ಹೈಕೋರ್ಟ್ ತೀರ್ಪಿಗೆ ಅಗೌರವ ತೋರುತ್ತಿದ್ದಾರೆ. ಕೂಡಲೇ ರಾಜೀನಾಮ ನೀಡಬೇಕು. ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದರೆ, ಮತ್ತೆ ಮುಖ್ಯಮಂತ್ರಿಯಾಗಲಿ ಎಂದರು.

ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ, ಬಿಜೆಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಹೇಳಿದರು.

ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಪ್ಯಾಲಿಸ್ಟೀನ್ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರೂ ಆಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್‌ಗೆ ಯಾವ ಶಬ್ದ ಉಪಯೋಗಿಸಬೇಕು. ಪರಮಪೂಜ್ಯ ಎನ್ನಬೇಕಾ? ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಟೀಕೆ ಮಾಡುವವರು ಒಮ್ಮೆ ಕೊಡಗಿನಲ್ಲಿ ಹೋಗಿ ನೋಡಿ ಬರಲಿ. ಹಿಂದೂಗಳನ್ನು ಮತಾಂತರ ಮಾಡಿದ್ದರು ಎಂದು ಟೀಕಿಸಿದರು.

ನಂತರ ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿ.ಎನ್‌. ಪಾಟೀಲ ಸತ್ಯನಾರಾಯಣ ಹೇಮಾದ್ರಿ, ವಿವೇಕಾನಂದ, ಮಲ್ಲಯ್ಯ ಮೂಗನೂರಮಠ, ಶಿವಾನಂದ ಸುರಪುರ ಮತ್ತಿತರರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.