ADVERTISEMENT

ಇಳಕಲ್ | ಸಂಕಷ್ಟದಲ್ಲಿ ರೈತರ, ಕೂಲಿಕಾರರ ಬದುಕು: ಕೆ.ಎ.ಬನ್ನಟ್ಟಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:57 IST
Last Updated 10 ಏಪ್ರಿಲ್ 2025, 13:57 IST
ಇಳಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಎ.ಬನ್ನಟ್ಟಿ ಮಾತನಾಡಿದರು
ಇಳಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಎ.ಬನ್ನಟ್ಟಿ ಮಾತನಾಡಿದರು   

ಇಳಕಲ್ : ‘ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯದಲ್ಲಿ ಅಭಿವ್ಯಕ್ತಿಗೊಂಡಿರುವ ರೈತರ, ಕೂಲಿಕಾರರ ಬದುಕಿನ ಸಾಮ್ಯತೆಯು ಈ ವರ್ಗ ಜಗತ್ತಿನಾದ್ಯಾಂತ ಸಂಕಷ್ಟದಲ್ಲಿರುವುದಕ್ಕೆ ನಿದರ್ಶನವಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಎ.ಬನ್ನಟ್ಟಿ ಹೇಳಿದರು.

 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ‘ಅಕ್ಷರ ಸಂಗಾತ’ ಸಾಹಿತ್ಯಿಕ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಓದು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಡ್ವಿನ್ ಮಾರ್ಕಹ್ಯಾಮ್ ಅವರ ‘ದ ಮ್ಯಾನ್ ವಿಥ್ ದ ಹ್ಯುಯಿ’ ಕಥೆಯ ತಮ್ಮ ಕನ್ನಡ ಅನುವಾದ ‘ಗುದ್ದಲಿಯ ಸಂಗಾತಿ’ ಕವನ ವಾಚಿಸಿ ಮಾತನಾಡಿದರು.

ಅಮೆರಿಕಾದ ಕವಯತ್ರಿ ಸಾರಾ ಟಿಸಾಲ್ಡ್‌ಳ ಕವನಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದ ಎಸ್.ವಿ.ಎಂ ಪದವಿ ಕಾಲೇಜಿನ ಪ್ರಾಧ್ಯಾಪಕ ವಸಂತಕುಮಾರ ಕಡ್ಲಿಮಟ್ಟಿ ಮಾತನಾಡಿ, ‘ನಿಸರ್ಗ, ಪ್ರೇಮ, ಏಕಾಂಗಿತನ ಹಾಗೂ ಸಾವಿನೊಂದಿಗೆ ಮುಖಾಮುಖಿಯಾಗುವ ವಸ್ತುಗಳನ್ನಿಟ್ಟುಕೊಂಡು ಸಾರಾ ಕಾವ್ಯ ಬರೆದಿದ್ದಾರೆ’ ಎಂದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ ಹೇಮಂತ ಭೂತನಾಳ ಮಾತನಾಡಿ, ‌‘ಅವಸರದ ಬದುಕಿನಲ್ಲಿ ದೇಹದ ಭಾಷೆಯನ್ನು ಹಾಗೂ ಆಹಾರವೂ ಔಷಧ ಎನ್ನುವುದನ್ನು ಅರ್ಥಮಾಡಕೊಳ್ಳದೇ, ವಿಷಯುಕ್ತ ಆಹಾರ ಸೇವಿಸುತ್ತಿದ್ದೇವೆ. ಆಹಾರದಷ್ಟೇ ಔಷಧ ಸೇವಿಸುವವರೂ ಇದ್ದಾರೆ’ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಮಹೇಶ ತಿಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ, ಕವಿ ಆರಿಫ್ ರಾಜಾ, ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ, ಲೇಖಕ ಟಿ.ಎಸ್.ಗೊರವರ ಮಾತನಾಡಿದರು.

ಸಂವಾದದಲ್ಲಿ ಲೇಖಕಿ ಲಲಿತಾ ಹೊಸಪ್ಯಾಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಪ್ರಾಧ್ಯಾಪಕ ತಿಪ್ಪೆಸ್ವಾಮಿ, ಗಾಯತ್ರಿ ದಾದ್ಮಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ, ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.