ADVERTISEMENT

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ತಮಟೆ ಚಳವಳಿ

ಮಾದಿಗ ಜಾತಿ ಉಪಜಾತಿ ಸಂಘಟನೆಗಳ ರಾಜ್ಯ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:11 IST
Last Updated 19 ಆಗಸ್ಟ್ 2025, 3:11 IST
ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ರಾಜ್ಯ ಒಕ್ಕೂಟದಿಂದ ಮಂಗಳವಾರ ತಮಟೆ ಚಳವಳಿ ಮಾಡಲಾಯಿತು
ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ರಾಜ್ಯ ಒಕ್ಕೂಟದಿಂದ ಮಂಗಳವಾರ ತಮಟೆ ಚಳವಳಿ ಮಾಡಲಾಯಿತು   

ಬಾಗಲಕೋಟೆ: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ಆಯೋಗ ನೀಡಿರುವ ವರದಿಯಂತೆ ಮಾದಿಗ ಉಪ ಜಾತಿಗಳಿಗೆ ನಿಗದಿ ಪಡಿಸಿರುವ ಶೇ6 ರಷ್ಟು ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ಮಾಡಲಾಯಿತು.

ವರದಿ ಕುರಿತು ಚರ್ಚಿಸಲು ಆ. 16ರಂದು ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆ.19ಕ್ಕೆ ಮುಂದಕ್ಕೆ ಹಾಕಿರುವುದರಿಂದ ಒಳಮೀಸಲಾತಿ ವಿರೋಧಿಗಳಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಸಮಯಾವಕಾಶ ಮಾಡಿ ಕೊಟ್ಟಂತಾಗಿದೆ. ನಾಗಮೋಹನ ದಾಸ್ ಆಯೋಗ ರಚಿಸುವುದು ಮಾದಿಗ ಸಮಾಜದ ಬೇಡಿಕೆಯಾಗಿರಲಿಲ್ಲ. ವರದಿ ಬಗ್ಗೆ ತಕರಾರು ತೆಗೆದು ಸಂಪುಟ ಉಪಸಮಿತಿ ರಚಿಸುವ ಹುನ್ನಾರ ನಡೆದಿದೆ ಎಂದು ದೂರಿದರು.

ನಾಗಮೋಹನ್ ದಾಸ್ ಆಯೋಗದ ಶಿಫಾರಸಿನಲ್ಲಿ ಆದಿಕರ್ನಾಟಕ (1,47,199 ) ಆದಿದ್ರಾವಿಡ (3,20,641) ಆದಿ ಆಂಧ್ರ (7,114 ) ಇದ್ದು, ಇವರನ್ನು ‘ಈ’ ಪ್ರವರ್ಗದಲ್ಲಿ ಗುರುತಿಸಲಾಗಿದೆ . ಈಗ ಅವರನ್ನು ಇಡೀಯಾಗಿ ‘ಈ’ ಗುಂಪಿಗೆ ಸೇರಿಸುವ ಹುನ್ನಾರ ನಡೆದಿದೆ . ಆದಿ ದ್ರಾವಿಡ ಗುರುತಿಸಿಕೊಂಡ ಬಹುತೇಕರು ಪೌರಕಾರ್ಮಿಕ ವೃತ್ತಿಯಲ್ಲಿದ್ದಾರೆ. ಮಾದಿಗ ಸಂಬಂಧಿತ ಜಾತಿಗಳವರಾಗಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೆಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರದ ವಿಳಂಬ ನೀತಿ ಬಳಸಿಕೊಂಡು ಸಹೋದರ ಗುಂಪಿನವರು ಬಲಾಬಲ ಪ್ರದರ್ಶನಕ್ಕೆ ಇಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಚಿವರೂ ಅನಗತ್ಯವಾಗಿ ಬೀದಿಗಿಳಿದು ದ್ವೇಷ ಭಾಷಣ ಮಾಡುವುದು ಪರಸ್ಪರ ಆಂತರ ಹೆಚ್ಚು ಮಾಡುತ್ತದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುತ್ತಣ್ಣ ಬೆಣ್ಣೂರ, ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಟವಳಿ, ಲಕ್ಷ್ಮಣ ಚಂದ್ರಗಿರಿ, ಕೃಷ್ಣಾ ಮಾದರ, ಮಹೇಶ್ ಹುಗ್ಗಿ, ಸಿದ್ದು ಮಾದರ, ಕಾಂತಿಚಂದ್ರ ಜ್ಯೋತಿ, ಹಣಮಂತ ಚಿಮ್ಮಲಗಿ, ಭೀಮಶಿ ಗೌಂಡಿ, ಸುನೀಲ್ ಕಂಬೋಗಿ ಮತ್ತಿತರರು ಪಾಲ್ಗಪಂಡಿದ್ದರು.

ವಿಳಂಬ ನೀತಿಗೆ ಆಕ್ರೋಶ

ಬಾಗಲಕೋಟೆ: ಸಿದ್ದರಾಮಯ್ಯ ಅವರು 2013 ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿದ್ದಾಗಲೂ ವಿಳಂಬ ನೀತಿ ಅನುಸರಿಸಿದ್ದರು. ಈಗಲೂ ಅದೇ ನೀತಿ ಮುಂದುವರೆಸಿದ್ದಾರೆ. ಅವರು ಮೂವರು ಸಚಿವರ ಕೈಗೊಂಬೆಯಾಗಿದ್ದಾರೆ. ಸಚಿವ ಸಂಪುಟ ಸಭೆ ನಡೆಸುವಷ್ಟೂ ಹಿಡಿತ ಉಳಿಸಿಕೊಂಡಿಲ್ಲ ಎಂದು ದೂರಿದರು. ರಾಜ್ಯಗಳೇ ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಬಂದು ವರ್ಷ ಕಳೆಯಿತು. ಆದರೂ ಜಾರಿಯಾಗಿಲ್ಲ. ನಾಗಮೋಹನ್ ದಾಸ್ ವರದಿಗೂ ಕಾಂತರಾಜ್ ವರದಿಗೆ ಆದ ಗತಿಯೇ ಆಗುತ್ತದೆಯೇನೊ ಎಂಬ ಆತಂಕ ಕಾಡುತ್ತಿದೆ. ನಾಗಮೋಹನ ದಾಸ್ ವರದಿಯನ್ನು ತಮ್ಮ ಮೂಗಿನ ನೇರಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಹುನ್ನಾರ ನೆಡದಿದೆ ಎಂದು ಆರೋಪಿಸಿದರು. ಸಂಪುಟ ಸಭೆಯಲ್ಲಿ ಮತ್ತೊಂದು ಸಮಿತಿ ರಚಿಸಲು ಮುಂದಾದರೆ ಉಗ್ರ ಹೋರಾಟಕ್ಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.