ಬಾಗಲಕೋಟೆ: ಉದ್ಯೋಗಂ ಪುರಷ ಲಕ್ಷಣ ಎಂದಿದ್ದ ನಾಣ್ನುಡಿ ಇಂದು ಉದ್ಯೋಗಂ ಮಾನವ ಲಕ್ಷಣ ಎಂದಾಗಿದೆ. ಆರ್ಥಿಕ ಸಬಲತೆಗೆ ಉದ್ಯೋಗವೇ ಮುಖ್ಯ ಆಯುಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.
ಬಿ.ವಿ.ವಿ.ಸಂಘದ ಬಸವೇಶ್ವರ ಕಲಾ ಕಾಲೇಜು, ಪ್ಲೇಸ್‌ಮೆಂಟ್ ವಿಭಾಗ ಹಾಗೂ ಸಮರ್ಥನಂ ಅಂಗವಿಕಲ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಬಸವೇಶ್ವರ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಜ್ಞಾನದ ಅರಿವು ನೀಡುತ್ತದೆ. ಜೊತೆಗೆ ಉದ್ಯೋಗ ಸಿಕ್ಕರೆ ಕುಟುಂಬ ನಿರ್ವಹಣೆ ಸುಲಭವಾಗುತ್ತದೆ ಎಂದರು.
ಅಂಗವಿಕಲರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದು, ಧನಾತ್ಮಕ ಹೆಜ್ಜೆಯಾಗಿದೆ. ಅಂಗವಿಕಲರಲ್ಲಿ ಇಚ್ಚಾಶಕ್ತಿ ಮತ್ತು ಒಳಗೊಳ್ಳುವಿಕೆ ತುಂಬಾ ಇರುವುದರಿಂದ ಅವರಿಗೆ ಮುಕ್ತ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಸಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಅಂಗವಿಕಲರು ಬಹಳ ಪ್ರತಿಭಾವಂತರಾಗಿರುತ್ತಾರೆ. ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಅಂಗವಿಕಲರು ಭಾಗವಹಿಸಿರುವುದು ಒಳ್ಳೆಯದು. ಉದ್ಯೋಗ ಯಾವುದೇ ಇರಲಿ, ಪೂರ್ಣ ಪ್ರಮಾಣದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಅರುಣಕುಮಾರ ಎಂ.ಜಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತಾಧಿಕಾರಿ ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.