
ಜಮಖಂಡಿ: ಕಿತ್ತೂರು ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಮಖಂಡಿಯ ಮಹಿಮೆಯನ್ನು ನಾಡಿಗೆ ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ಒದಗಿಸುತ್ತಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಇಲ್ಲಿನ ಸರ್ಕಾರಿ ಪಿ.ಬಿ. ಹೈಸ್ಕೂಲ್‌ನ ಡಾ.ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಸೌರಭ ವೇದಿಕೆ ಹಾಗೂ ವೀರೇಶ್ವರ ಪ್ರಕಾಶನದ ಆಶ್ರಯದಲ್ಲಿ ನಡೆದ ಕವಿಗೋಷ್ಠಿ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ನಿರಂತರವಾಗಿ ಮಾಡುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ. ಪ್ರತಿಭೆಗಳನ್ನು ಸನ್ಮಾನಿಸುವುದರಿಂದ ಪ್ರತಿಭಾವಂತರ ಆಯುಷ್ಯ ವೃದ್ಧಿಯಾಗುತ್ತದೆ ಎಂದರು.
ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಪ್ರತಿಭೆ ಮತ್ತು ಸಾಧನೆ ಎಂದಿಗೂ ಆಕಸ್ಮಿಕವಲ್ಲ. ನಿರಂತರವಾದ ಪ್ರಾಮಾಣಿಕ ಪ್ರಯತ್ನ ಮತ್ತು ತಪಸ್ಸಿನಿಂದ ಸಾಧನೆ ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಸಂಗಮೇಶ ಮಟೋಳಿ, ಕಸಾಪ ರಬಕವಿ-ಬನಹಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಮ.ಕೃ. ಮೇಗಾಡಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕಿ ಇಂದಿರಾ ಜಲದುರ್ಗ, ಶ್ರೀದೇವಿ ಸುವರ್ಣಖಂಡಿ, ಗಣಪತಿ ಗಲಗಲಿ, ಭಾಗ್ಯಶ್ರೀ ಕೋಟಿ, ಚಿದಾನಂದ ಜಡಿಮಠ, ಚಂದ್ರಕಲಾ ಜನಗೊಂಡ, ಪ್ರವೀಣ ಕುಲಕರ್ಣಿ, ಬಾಹುಬಲಿ ಬಿರಾದಾರಪಾಟೀಲ, ಗುರುನಾಥ ಸುತಾರ ಸ್ವರಚಿತ ಕವನ ವಾಚಿಸಿದರು. ಒಟ್ಟು 39 ಜನ ವಿಶೇಷ ಸಾಧಕರನ್ನು ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಎಂ.ಡಿ. ಸಂಖ, ಇಬ್ರಾಹಿಂ ಅರಬ, ಪರಶುರಾಮ ಗುದಗಿಯವರ ತಮ್ಮ ಅನಿಸಿಕೆ ಹಂಚಿಕೊಂಡರು. ಪ್ರಾಚಾರ್ಯ ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಮೌನೇಶ ಬಡಿಗೇರ ನಿರೂಪಿಸಿದರು. ಪ್ರೊ.ಆರ್.ಕೆ. ಹೊಸಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.