ಕೆರೂರ: ನಿತ್ಯ ಸಾವಿರಾರು ಜನರು ಭೇಟಿ ನೀಡುವ ಇಲ್ಲಿನ ಬಸ್ ನಿಲ್ದಾಣವು ಅಸಮರ್ಪಕ ನಿರ್ವಹಣೆಯ ಕಾರಣ ಕಸದ ತೊಟ್ಟಿಯಂತಾಗಿದೆ. ಮಳೆ ಬಂದಾಗ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ.
ಹುಬ್ಬಳ್ಳಿ– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಬಸ್ ನಿಲ್ದಾಣದಿಂದ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತವೆ. ನಿಲ್ದಾಣದಲ್ಲಿನ ಅವ್ಯವಸ್ಥೆ ಕಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಿಲ್ದಾಣದ ಆವರಣದಲ್ಲಿ ಎಲ್ಲಂದರಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಕುಳಿತುಕೊಳ್ಳಲು ಸುಸಜ್ಜಿತ ಆಸನಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಬಸ್ ಬಂದು ತಂಗುವ ಸ್ಥಳದಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಕಬ್ಬಿಣ ಚಡಿಗಳು ಮೇಲೆ ಎದ್ದಿವೆ. ಪ್ರಯಾಣಿಕರು ಕಬ್ಬಿಣದ ಚಡಿಗಳಿಗೆ ಎಡವಿ ಬೀಳುವ ಅಪಾಯವಿದೆ. ಮುಖ್ಯದ್ವಾರದಲ್ಲಿ ದ್ವಿಚಕ್ರ ವಾಹನಗಳ ದರ್ಬಾರ್ ಹೆಚ್ಚಾಗಿದೆ. ಹೀಗೆ ಸಮಸ್ಯೆಗಳ ಸರಮಾಲೆಯಲ್ಲಿ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಸ್ವಚ್ಛತೆ ಮರೀಚಿಕೆ: ನಿಲ್ದಾಣದ ಆವರಣದ ಪಕ್ಕದಲ್ಲಿ ಅಕ್ಕಪಕ್ಕದ ಅಂಗಡಿಯವರು ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುತ್ತಾರೆ. ಕಸದ ಬುಟ್ಟಿಗಳು ಮಾಯವಾಗಿವೆ. ಜನರು ಅಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ನಿಲ್ದಾಣವು ಗಬ್ಬದ್ದೆ ನಾರುತ್ತಿದ್ದೆ.
ಮೂತ್ರ ವಿಸರ್ಜನೆಗೆ ಶುಲ್ಕ: ನಿಲ್ದಾಣದಲ್ಲಿನ ಶೌಚಾಲಯದ ನಿರ್ವಹಣೆ ಪಡೆದ ಗುತ್ತಿಗೆದಾರರು ಪ್ರಯಾಣಿಕರಿಂದ ಮೂತ್ರ ವಿಸರ್ಜನೆಗೆ ಹಣ ವಸೂಲಿ ಮಾಡುತ್ತಾರೆ. ಇದರಿಂದ ಗ್ರಾಮೀಣ ಜನರು ಹೊರಗಡೆ ಮೂತ್ರ ವಿಸರ್ಜನೆಗೆ ಮಾಡಿ ತೆರಳುತ್ತಾರೆ. ದುರ್ವಾಸನೆ ಹೆಚ್ಚಾಗಿ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ನಿಲ್ದಾಣದಲ್ಲಿ ಸಾಕಷ್ಟು ಕಸದ ರಾಶಿ ಬಿದ್ದಿದ್ದರೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾತ್ರ ಗಮನಿಸದೆ ಮೌನವಹಿಸಿದ್ದಾರೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ದುರ್ವಾಸನೆ ಹೆಚ್ಚಾಗಿದೆ. ಪಟ್ಟಣ ಪಂಚಾಯಿತಿಯವರು ಹಾಗೂ ಸಾರಿಗೆ ಇಲಾಖೆಯವರು ಕ್ರಮ ಕೈಗೊಳ್ಳಬೇಕು
-ಯಮನೂರ ವಡ್ಡರ ಸ್ಥಳೀಯ ಪ್ರಯಾಣಿಕ
ಪಟ್ಟಣ ಪಂಚಾಯಿತಿಯಿಂದ ಕುಡಿಯುವ ನೀರಿನ ನಳದ ಸಂಪರ್ಕ ಪಡೆಯಲಾಗಿದೆ. ಶೀಘ್ರವೇ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗುವುದು. ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು
-ಅಶೋಕ ಕೋರಿ ಬಾದಾಮಿ ಘಟಕ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.