ADVERTISEMENT

ಕೆರೂರ | ಮಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 3:03 IST
Last Updated 12 ಆಗಸ್ಟ್ 2025, 3:03 IST
ಕೆರೂರ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಸ್ಥಳಿಯ ಪಟ್ಟಣ ಪಂಚಾಯಿತಿ,ಕಂದಾಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದರು.
ಕೆರೂರ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಸ್ಥಳಿಯ ಪಟ್ಟಣ ಪಂಚಾಯಿತಿ,ಕಂದಾಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದರು.   

ಕೆರೂರ: ಕಳೆದ ಮೂರು–ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಹಾನಿಯಾದ ಪ್ರದೇಶಗಳಿಗೆ ಸೋಮವಾರ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ವೀಕ್ಷಿಸಿದರು.

ಪಟ್ಟಣದಲ್ಲಿ ನಿರಂತರವಾಗಿ ಸುರಿದ ಮಳೆಗೆ 14 ಮನೆಗಳು ಕುಸಿತಗೊಂಡಿವೆ. ಕೆಲವು ಮನೆಗಳು ಬೀಳುವ ಅಪಾಯದ ಸ್ಥಿತಿಯಲ್ಲಿವೆ. ಇನ್ನುಳಿದ ಕೆಲವು ಮನೆಗಳು ಸೋರುತ್ತಿರುವುದರಿಂದ ದೈನಂದಿನ ಜೀವನ ನಡೆಸಲು ಕುಟುಂಬಗಳು ಪರದಾಡುವಂತಾಗಿದೆ.

ನಿರಂತರ ಮಳೆಯಾಗಿ ಮನೆಗಳು ಸೋರುತ್ತಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೂ ತೊಂದರೆ ಉಂಟಾಗಿದೆ.

ADVERTISEMENT

ಸ್ಥಳೀಯ ಹೊಸಪೇಟಿ ಬಡಾವಣೆ, ಕಿಲ್ಲಾ ಪೇಟೆ, ಖಾಜಿ ಓಣಿ, ಹಳಪೇಟೆ ಬಡಾವಣೆಗಳಲ್ಲಿ ಹಾನಿಯಾಗಿರುವ ಮನೆಗಳಿಗೆ ಪಟ್ಟಣ ಪಂಚಾಯಿತಿ ಎಂಜಿನಿಯರ್‌ ಎಂ.ಐ. ಹೊಸಮನಿ, ಉಪತಹಶೀಲ್ದಾರ್ ವೀರೇಶ ಬಡಿಗೇರ, ಕಂದಾಯ ನಿರೀಕ್ಷಕ ಆನಂದ ಭಾವಿಮಠ ಭೇಟಿ ನೀಡಿ ಪರಿಶೀಲಿಸಿದರು.

‘ನಮ್ಮದು ನೇಕಾರಿಕೆ ಕುಟುಂಬ. ಬಿಡುವಿಲ್ಲದೆ ಮಳೆ ಸುರಿದಿದ್ದರಿಂದ ಮನೆಯ ಮೆಲ್ಚಾವಣಿ ಕುಸಿದಿದೆ. ಕೈಮಗ್ಗದ ಸಾಮಗ್ರಿಗಳು ಎಲ್ಲವೂ ಹಾನಿಯಾಗಿವೆ. ಬೇರೆ ಏನಾದರು ಮಾಡೋಣ ಅಂದರೆ ಮನೆಯು ಸೋರುತ್ತಿದೆ. ತುಂಬಾ ತೊಂದರೆಯಾಗಿದೆ’ ಎಂದು ಹೇಮಾವತಿ ತಂಬೂರಿ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

ಹಾನಿಯಾದ ಪ್ರದೇಶಗಳನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು, ‘ಮನೆಗಳು ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ಸರ್ಕಾರದ ನಿಯಮಾನುಸಾರ ಹಾನಿಯಾದ ಮನೆಗಳಿಗೆ ಪರಿಹಾರ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಇನ್ನೂ ಮಳೆಯಾಗುವ ಸಾಧ್ಯತೆ ಇದ್ದು, ಅಪಾಯದಲ್ಲಿರುವ ಮನೆಗಳ ಕುಟುಂಬಸ್ಥರು ಮುಂಜಾಗ್ರತಾ ಕ್ರಮವಾಗಿ ಬೇರೆ ಕಡೆ ಸ್ಥಳಾಂತರಗೊಳ್ಳಬೇಕು’ ಎಂದು ಅಧಿಕಾರಿಗಳು ಸೂಚಿಸಿದರು.

ಕೆರೂರ ಗ್ರಾಮ ಆಡಳಿತ ಅಧಿಕಾರಿ ಇಕ್ಬಾಲ್ ಮುಲ್ಲಾ, ಗ್ರಾಮ ಸಹಾಯಕ ಪ್ರದೀಪ ತುಳಸಿಗೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.