ಬಾಗಲಕೋಟೆ: ಕೃಷ್ಣೆಯ ಸಂಸ್ಕೃತಿ ಬಿಂಬಿಸುವ ದೃಷ್ಟಿಯಿಂದ ಕೃಷ್ಣಾ ಆರತಿ ಸೇವಾ ಸಮಿತಿ, ಎಂ.ಆರ್.ಎನ್. ಫೌಂಡೇಶನ್ ಸಹಯೋಗದಲ್ಲಿ ಆ.16 ರಂದು ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯಸ್ನಾನ– ಕೃಷ್ಣಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 100ಕ್ಕೂ ಹೆಚ್ಚು ಹಿಮಾಲಯದ ಅಘೋರಿಗಳು, ನಾಗಾ ಸಾಧುಗಳು, ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ನಡೆಯಲಿದೆ. ಅಂದೇ ಇರುವ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಜನ್ಮ ದಿನ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣ ಕೃಷ್ಣಾ ನದಿ ತೀರದಲ್ಲಿ ನಡೆಯಲಿದ್ದು, ಬೆಳಿಗ್ಗೆ 6ಕ್ಕೆ ನಾಡಿನ 501 ದೇವಸ್ಥಾನಗಳಲ್ಲಿ ವಿಶೇಷ ಮಹಾಪೂಜೆ, ಬೆಳಿಗ್ಗೆ 10ಕ್ಕೆ 250 ದೇವರ ಪಲ್ಲಕ್ಕಿಗಳ ಮೆರವಣಿಗೆ, ವಾದ್ಯಮೇಳ, ಪೂರ್ಣಕುಂಭ ಶೋಭಾಯಾತ್ರೆ, ನದಿಪೂಜೆ, ಬಾಗಿನ ಸಮರ್ಪಣೆ ನಡೆಯಲಿದೆ.
ಬೆಳಿಗ್ಗೆ 11.30ಕ್ಕೆ ಪುಣ್ಯಸ್ನಾನ, ಮಧ್ಯಾಹ್ನ 3ಕ್ಕೆ ಹೋಮ, ಹವನ, ಸಂಜೆ 6ಕ್ಕೆ ಗಂಗಾ ಆರತಿ ಮಾಡುವ ಪಂಡಿತರಿಂದ ಕೃಷ್ಣೆಗೆ ಭವ್ಯ ಆರತಿ, ರಾತ್ರಿ 8ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 12ಕ್ಕೆ ಕೃಷ್ಣ ತೊಟ್ಟಿಲೋತ್ಸವ ಜರುಗಲಿದೆ. 70 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಸುತ್ತಲಿನ ಗ್ರಾಮಸ್ಥರು ಸ್ವಚ್ಛತೆ, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಮುರುಗೇಶ ನಿರಾಣಿ ಜನ್ಮ ದಿನ ಅಂಗವಾಗಿ ಬಡ ಕುಟುಂಬಗಳ ಪ್ರತಿಭಾವಂತ 100 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಪದವಿಯವರೆಗೆ ಶೈಕ್ಷಣಿಕ ನೆರವು ನೀಡಲಾಗುವುದು. ನಿರಾಣಿ ಸಮೂಹದ ವಿವಿಧ ಘಟಕಗಳ ಭೂಮಿ ಪೂಜೆ, ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ಆ.19 ರಂದು ಸಾವಳಗಿ, 21ರಂದು ಬನಹಟ್ಟಿ, 22ರಂದು ಬೀಳಗಿ, 25ರಂದು ಜಮಖಂಡಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳು ನಡೆಯಲಿವೆ. ಆ.26 ರಂದು ಮುಧೋಳದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಜರುಗಲಿವೆ ಎಂದರು.
ವಿಚಾರ ಸಂಕಿರಣ ಆ.19 ರಂದು ಸುರೆಬಾನ ಬಾದಾಮಿ 20ರಂದು ವಜ್ಜರಮಟ್ಟಿ ಕೆರೂರ ನಂದೇಶ್ವರ 21ರಂದು ಲೋಕಾಪುರ 22ರಂದು ಯಂಡಿಗೇರಿ 23ರಂದು ಸಿದ್ದಾಪುರದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30ವರೆಗೆ ಉಚಿತ ಕೃಷಿ ವಿಚಾರ ಸಂಕಿರ್ಣ ಹಾಗೂ ಕಬ್ಬು ಅಭಿವೃದ್ಧಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆ.18 ರಂದು ಸಿದ್ದಾಪುರ 19ರಂದು ಒಂಟಗೋಡಿ ಯಂಡಿಗೇರಿ ಹೂಲಗೇರಿ 21ರಂದು ಬೆಳಗಲಿ ಶಿರೋಳ ಬಾದಾಮಿ 22 ರಂದು ಕೆರೂರ ಕಮಗತಿಯಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದರು.
ಕೃಷ್ಣೆ ಕಡಗಣನೆ: ದುರ್ದೈವ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಕಡಗಣನೆಯಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಸಂಗಮೇಶ ನಿರಾಣಿ ಹೇಳಿದರು. ಈ ಭಾಗದ ರೈತರ ರಾಜಕೀಯ ನಾಯಕರ ಒಗ್ಗಟ್ಟಿನ ಕೊರತೆಯಿಂದಾಗಿ ಯೋಜನೆ ಮಂದಗತಿಯಲ್ಲಿ ಸಾಗಿದೆ. ಎತ್ತಿನಹೊಳೆಯ 6–7 ಟಿಎಂಸಿ ಅಡಿ ನೀರಿಗಾಗಿ ₹25 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. ಇಲ್ಲಿ 130 ಟಿಎಂಸಿ ಅಡಿ ನೀರಿಗಾಗಿ ಬಜೆಟ್‌ನ ಶೇ20ರಷ್ಟು ಅನುದಾನ ನೀಡಬೇಕಾಗಿತ್ತು. ಶೇ3ರಷ್ಟು ಮಾತ್ರ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಕಾವೇರಿಗೆ ಸಿಕ್ಕ ಆದ್ಯತೆ ಕೃಷ್ಣೆಗೆ ಸಿಕ್ಕಿಲ್ಲ. ಹಿಪ್ಪರಗಿ ಬ್ಯಾರೇಜು ಅಗಲ ಸಣ್ಣದಾಗಿದ್ದು ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. 10 ವರ್ಷಗಳ ಹಿಂದೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿಲ್ಲ. ಏತ ನೀರಾವರಿ ಯೋಜನೆಗಳೂ ಮಂದಗತಿಯಲ್ಲಿ ನಡೆದಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.