ಹಣ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಇತ್ಯರ್ಥಗೊಂಡ ಪ್ರಕರಣ ಹಾಗೂ ಭೂಸ್ವಾಧೀನ ಪ್ರಕರಣಗಳಲ್ಲಿ ಸರ್ಕಾರ ₹2 ಸಾವಿರ ಕೋಟಿ ಪಾವತಿಸಬೇಕಿದೆ. ಪರಿಹಾರ ಹಣ ಪಾವತಿ ವಿಳಂಬದಿಂದಾಗಿ ಸರ್ಕಾರ ರೈತರಿಗೆ ಪಾವತಿಸಬೇಕಾದ ಬಡ್ಡಿಯ ನಿತ್ಯದ ಮೊತ್ತ ₹ 1 ಕೋಟಿಗೇರಿದೆ.
ಪುನರುತ್ಥಾನ ಯೋಜನೆ (ಆರ್ ಆ್ಯಂಡ್ ಆರ್) ಅಡಿ ಘೋಷಿಸಿದ ಪರಿಹಾರ ಒಪ್ಪದೇ ಹೆಚ್ಚಿನ ಪರಿಹಾರಕ್ಕೆ ಅರ್ಜಿ ಸಲ್ಲಿಸಿದಾಗಿನಿಂದಲೇ ಘೋಷಿತ ಪರಿಹಾರಕ್ಕೆ ಸರ್ಕಾರ ವಾರ್ಷಿಕ ಶೇ 12ರಿಂದ 15ರಷ್ಟು ಬಡ್ಡಿ ಪಾವತಿಸಬೇಕು. ಆ ಬಡ್ಡಿಯ ನಿತ್ಯದ ಮೊತ್ತವೇ ಅಂದಾಜು ₹1 ಕೋಟಿ ಆಗುತ್ತಿದೆ.
ಯುಕೆಪಿ 3ನೇ ಹಂತದ ಯೋಜನೆ ಜಾರಿಗೆ 1.33 ಲಕ್ಷ ಎಕರೆ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇಲ್ಲಿಯವರೆಗೆ ಯುಕೆಪಿ ಪುನರ್ವಸತಿ, ಪುನರ್ ನಿರ್ಮಾಣ (ಆರ್ ಆ್ಯಂಡ್ ಆರ್) ಇಲಾಖೆಯು 29,500 ಎಕರೆ ಭೂಸ್ವಾಧೀನ ಮಾಡಿಕೊಂಡಿದೆ. ಇನ್ನೂ 1,03,500 ಎಕರೆ ಭೂಸ್ವಾಧೀನವಾಗಬೇಕಿದೆ.
ಭೂಸ್ವಾಧೀನ ಪಡಿಸಿಕೊಂಡ ಭೂಮಿಗೆ ಆರ್ ಆ್ಯಂಡ್ ಆರ್‌ನಿಂದ ಮಾರುಕಟ್ಟೆಯ ದರದ ನಾಲ್ಕು ಪಟ್ಟು ಪರಿಹಾರ ಘೋಷಿಸಲಾಗಿದೆ. ಆದರೆ, ಇದನ್ನೊಪ್ಪದ ರೈತರು ಹೆಚ್ಚಿನ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಅಂತಹ ಪ್ರಕರಣಗಳ ವಿಚಾರಣೆ ನಡೆದಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನ್ಯಾಯಾಲಯಗಳಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ಸಾಧ್ಯವಾಗುತ್ತಿಲ್ಲ. ಹೆಚ್ಚುವರಿ ನ್ಯಾಯಾಲಯಗಳ ಆರಂಭಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ನ್ಯಾಯಾಲಯಗಳಿಗೆ ಮಂಜೂರಾತಿ ಸಿಕ್ಕಿಲ್ಲ.
ಈಗ ಕೇವಲ ಶೇ 25ರಷ್ಟು ಪ್ರದೇಶ ಮಾತ್ರ ಭೂಸ್ವಾಧೀನವಾಗಿದ್ದು, ಇನ್ನೂ ಶೇ75ರಷ್ಟು ಪ್ರದೇಶ ಭೂಸ್ವಾಧೀನವಾಗಬೇಕಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ.
‘ನ್ಯಾಯಾಲಯದಲ್ಲಿ ತಿಂಗಳಿಂದ ಹಿಡಿದು ನಾಲ್ಕು ವರ್ಷದವರೆಗಿನ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅವುಗಳ ವಿಚಾರಣೆ ವಿಳಂಬವಾದಷ್ಟು ಒಂದೆಡೆ ರೈತರಿಗೆ ತೊಂದರೆಯಾದರೆ, ಇನ್ನೊಂದೆಡೆ ಸರ್ಕಾರದ ಮೇಲಿನ ಆರ್ಥಿಕ ಹೊರೆ ಹೆಚ್ಚಲಿದೆ. ತ್ವರಿತ ಇತ್ಯರ್ಥಕ್ಕೆ ಹೆಚ್ಚುವರಿಯಾಗಿ ಆರು ನ್ಯಾಯಾಲಯ ಮಂಜೂರು ಮಾಡಬೇಕು’ ಎಂದು ಬಾಗಲಕೋಟೆ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ ಆಗ್ರಹಿಸಿದರು.
ಹೊಸ ಪ್ರಾಧಿಕಾರ ರಚನೆಗೆ ಶಿಫಾರಸು
ಯುಕೆಪಿಗೆ ಬೇಕಾಗಿರುವ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ತಪ್ಪಿಸಲು ಪ್ರತ್ಯೇಕ ಭೂಸ್ವಾಧೀನ
ಪ್ರಾಧಿಕಾರ ರಚಿಸಬೇಕು ಎಂದು ಯುಕೆಪಿ ಪುನರ್ವಸತಿ, ಪುನರ್ ನಿರ್ಮಾಣ ಇಲಾಖೆ ಮಹಾವ್ಯವಸ್ಥಾಪಕ ಮಾಧವರಾವ್ ಗಿತ್ತೆ ಶಿಫಾರಸು ಮಾಡಿದ್ದಾರೆ.
ಸದ್ಯ ಭೂಸ್ವಾಧೀನ, ಆರ್ ಆ್ಯಂಡ್ ಆರ್‌ನ ಏಳು ಕಚೇರಿಗಳಿವೆ. ಅಲ್ಲಿ ಒಂದೊಂದು ಬಗೆ ಪರಿಹಾರ ನಿಗದಿ ಮಾಡಲಾಗುತ್ತಿದೆ. ಜಮಖಂಡಿ ಪ್ರಕರಣವೊಂದರಲ್ಲಿ ನ್ಯಾಯಾಲಯ ಪ್ರತಿ ಎಕರೆಗೆ ₹7.60 ಕೋಟಿ ನಿಗದಿ ಮಾಡಿದ್ದರೆ, ಬಾಗಲಕೋಟೆಯ ಪ್ರಕರಣಗಳಲ್ಲಿ ಸರಾಸರಿ ಪ್ರತಿ ಎಕರೆಗೆ ₹2.16 ಕೋಟಿಯಾಗಿದೆ ಎಂದು ತಿಳಿಸಿದ್ದಾರೆ.
ವಿವಿಧ ನ್ಯಾಯಾಲಯಗಳಲ್ಲಿ ವಾರಕ್ಕೆ ಒಂದೆರಡು ವಿಚಾರಣೆ ನಡೆಯುತ್ತಿರುವುದರಿಂದ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ. ಪರಿಹಾರದ ಮೊತ್ತಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತಿದೆ. ಇದನ್ನು ತಪ್ಪಿಸಲು ಪ್ರಾಧಿಕಾರ ರಚಿಸಿ, ಅಗತ್ಯ ಸಿಬ್ಬಂದಿ ನೇಮಿಸಿ ಕಾಲಮಿತಿಯಲ್ಲಿ ಭೂಸ್ವಾಧೀನ, ಪರಿಹಾರ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮುಂದಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.
–––
ಹಲವು ಪ್ರಕರಣಗಳಲ್ಲಿ ಸರ್ಕಾರ ಪರಿಹಾರ ಮೊತ್ತಕ್ಕಿಂತ ಎರಡು ಪಟ್ಟು ಬಡ್ಡಿ ಪಾವತಿಸಿದ ಉದಾಹರಣೆಗಳಿವೆ
–ಶಿವಾನಂದ ಟವಳಿ, ವಕೀಲ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.