ADVERTISEMENT

ಕೂಡಲಸಂಗಮ | ದಶಕದಿಂದ ಸಿಗದ ಸೌಕರ್ಯ

ತುರಡಗಿ ಪುನರ್ವಸತಿ ಕೇಂದ್ರದ ನಿವಾಸಿಗಳ ಪರದಾಟ

ಶ್ರೀಧರ ಗೌಡರ
Published 19 ಡಿಸೆಂಬರ್ 2024, 5:32 IST
Last Updated 19 ಡಿಸೆಂಬರ್ 2024, 5:32 IST
<div class="paragraphs"><p>ತುರಡಗಿ ಪುನರ್ವಸತಿ ಕೇಂದ್ರದ ಮಣ್ಣಿನ ರಸ್ತೆ ಮೇಲೆ ಚರಂಡಿ ನೀರು ಸಂಗ್ರಹವಾಗಿರುವುದು</p></div>

ತುರಡಗಿ ಪುನರ್ವಸತಿ ಕೇಂದ್ರದ ಮಣ್ಣಿನ ರಸ್ತೆ ಮೇಲೆ ಚರಂಡಿ ನೀರು ಸಂಗ್ರಹವಾಗಿರುವುದು

   

ಕೂಡಲಸಂಗಮ: ಗ್ರಾಮಸ್ಥರು ನಿತ್ಯ ಬಳಸುವ ನೀರು ಚರಂಡಿಗಳ ಮೂಲಕ ಸಾಗಲು ಜಾಗವಿಲ್ಲದೆ, ಅಲ್ಲೇ ನಿಂತು ಗಬ್ಬು ನಾರುತ್ತಿದೆ. ಸೊಳ್ಳೆಗಳ ಕಾಟ, ಮಣ್ಣಿನ ರಸ್ತೆಯಲ್ಲಿ ಸಂಚರಿಸಲು ಜನರ ಪರದಾಟ, ಮಳೆ ಸುರಿದರೆ ಒಂದು ಮನೆಯಿಂದ ಇನ್ನೊಂದು ಮನೆಗೆ ಹೊಗಲು ಹರಸಾಹಸ, ವಾಹನ ಸವಾರರ ಸ್ಥಿತಿಯಂತೂ ಹೇಳತೀರದು... ಇದು ತುರಡಗಿ ಪುನರ್ವಸತಿ ಕೇಂದ್ರದ ದುಃಸ್ಥಿತಿ.

ನಾರಾಯಣಪುರ ಜಲಾಶಯ ಹಿನ್ನೀರಿನ ಕೃಷ್ಣಾ ನದಿಯ ಪ್ರವಾಹಕ್ಕೆ ತುತ್ತಾದ ತುರಡಗಿ ಗ್ರಾಮದ ಜನ ಒಂದು ದಶಕದವರೆಗೆ ತಗಡಿನ ಶೆಡ್ಡಿನಲ್ಲೇ ಜೀವನ ಸಾಗಿಸಿದರು. ನಂತರ ಪುನರ್ವಸತಿ ಕೇಂದ್ರದಲ್ಲಿ ಹಕ್ಕುಪತ್ರ ಪಡೆದು, ಮನೆ ನಿರ್ಮಿಸಿಕೊಂಡಿದ್ದಾರೆ. ಎರಡು ದಶಕ ಕಳೆದರೂ ಈವರೆಗೂ ಸಂತ್ರಸ್ತರಿಗೆ ಮೂಲಸೌಕರ್ಯ ದೊರೆತಿಲ್ಲ.

ADVERTISEMENT

‘ಪುನರ್ವಸತಿ ಕೇಂದ್ರ ನಿರ್ಮಿಸಲು ಒಂದು ದಶಕವಾಯಿತು. ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯವನ್ನು ಸಮಪರ್ಕವಾಗಿ ಪೂರೈಸುತ್ತೇವೆಂದು ಭರವಸೆ ಕೊಟ್ಟರು. ಪುನರ್ವಸತಿ ಕೇಂದ್ರದಲ್ಲಿ ಸಮಸ್ಯೆಗೆ ಮುಕ್ತಿ ಸಿಗಬಹುದು ಎಂದುಕೊಂಡರೆ, ಮೂಲಸೌಕರ್ಯವಿಲ್ಲದೆ ‌ಬದುಕು ಅತಂತ್ರ
ವಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಪುನರ್ವಸತಿ ಕೇಂದ್ರದ ಎರಡು ರಸ್ತೆಗೆ ಮಾತ್ರ ಸಿಮೆಂಟ್‌ ಕಾಂಕ್ರೀಟ್‌ ಹಾಕಿದ್ದು, ಉಳಿದೆಲ್ಲ ರಸ್ತೆಗಳು ಮಣ್ಣಿನಿಂದ ಕೂಡಿವೆ. ಈ ರಸ್ತೆಗಳಲ್ಲಿ ತಗ್ಗು–ಗುಂಡಿಗಳಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು, ಸಂಚರಿಸಲು ತೊಂದರೆಯಾಗುತ್ತದೆ. ಸಂಬಂಧಪಟ್ಟ ಇಲಾಖೆಯವರಿಗೆ ದಶಕದಿಂದಲೂ ಮನವಿ ನೀಡಿದರೂ ಪ್ರಯೋಜನ
ವಾಗಿಲ್ಲ’ ಎಂದು ಹೇಳಿದರು.

‘ಎಲ್ಲ ಚರಂಡಿಗಳು ಸಂಪೂರ್ಣ ಕಿತ್ತುಹೋಗಿದ್ದು, ನೀರು ಮುಂದೆ ಸಾಗುತ್ತಿಲ್ಲ. ನಿಂತ ನೀರಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ರೋಗಗಳ ಭೀತಿ ಎದುರಾಗಿದೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವುದರಿಂದ ಆ ಕಟ್ಟಡವೂ ನಿರುಪಯುಕ್ತವಾಗಿದೆ. ಚಿಕಿತ್ಸೆ ಪಡೆಯಲು 5 ಕಿ.ಮೀ ದೂರದ ಕೂಡಲ
ಸಂಗಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಬೇಕು’ ಎಂದರು.

‘ನೀರು ಪೂರೈಕೆ ಸಮಪರ್ಕವಾಗಿಲ್ಲ. ಬೀದಿ ದೀಪಗೇು ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಗಿಡ ಗಂಟಿಗಳು ಬೆಳೆದಿವೆ. ಅಧಿಕಾರಗಳು ಕಣ್ಣುಮುಚ್ಚಿ ಕುಳಿತಿದ್ದು, ಈ ಭಾಗದ ಜನಪ್ರತಿನಿಧಿಗಳು ಸಹ ಇತ್ತ ಗಮನಹರಿಸಿಲ್ಲ’ ಎಂದು ಹೇಳಿದರು.

‘ಗ್ರಾ.ಪಂಗೆ ಹಸ್ತಾಂತರವಾಗದ ಕೇಂದ್ರ’

‘ಪುನರ್ವಸತಿ ಕೇಂದ್ರವು ಬಿಸಲದಿನ್ನಿ ಗ್ರಾಮ ಪಂಚಾಯಿತಿಗೆ ಹಸ್ತಾಂತರವಾಗದೇ ಇರುವುದರಿಂದ ಎಲ್ಲ ಮೂಲಸೌಕರ್ಯಗಳನ್ನು ಆಲಮಟ್ಟಿ ಪುನರ್ವಸತಿ ನಿರ್ಮಾಣ ಇಲಾಖೆಯೇ ಒದಗಿಸಬೇಕಿದೆ. ಯಾವ ಸೌಲಭ್ಯಗಳು ಸಂತ್ರಸ್ತರ ಕೇಂದ್ರಕ್ಕೆ ಬರುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ತುರಡಗಿ ಹೇಳಿದರು.

‘ಪುನರ್ವಸತಿ ನಿರ್ಮಾಣ ಇಲಾಖೆ ಅಧಿಕಾರಿಗಳೇ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಮುಂದಾಗುತ್ತಿಲ್ಲ. ಹಾಗಾಗಿ, ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಯೋಜನೆ ರೂಪಿಸಲು ಆಗುತ್ತಿಲ್ಲ. ಆದರೂ, ಬೀದಿ ದೀಪ ಹಾಕಿಸುವ ಕಾರ್ಯ ಮಾಡಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.