ADVERTISEMENT

ಬಾಗಲಕೋಟೆ | ದೂರದೃಷ್ಟಿ ಕೊರತೆ: ನೀರಿಗೆ ಪರದಾಟ

ಬನ್ನಿದಿನ್ನಿ ಬ್ಯಾರೇಜ್‌ಗೆ ತಲುಪದ ಜಲಾಶಯದಿಂದ ಬಿಟ್ಟ ನೀರು ನದಿದಂಡೆಯಲ್ಲಿ ಅನ್ಯಕಾರ್ಯಕ್ಕೆ ಬಳಕೆ: ನವನಗರದ ಜನರಿಗೆ ತೊಂದರೆ

ಬಸನವಾರ ಹವಾಲ್ದಾರ
Published 20 ಏಪ್ರಿಲ್ 2025, 4:11 IST
Last Updated 20 ಏಪ್ರಿಲ್ 2025, 4:11 IST
<div class="paragraphs"><p>ನೀರು.</p></div>

ನೀರು.

   

ಬಾಗಲಕೋಟೆ: ನವನಗರವನ್ನು ಚಂಡೀಗಢ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಕುಡಿಯುವ ನೀರಿನ ಯೋಜನೆಗೆ ಮಾತ್ರ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ವರ್ಷಪೂರ್ತಿ ವಾರಕ್ಕೆ ಮೂರು ಬಾರಿ ನದಿ ಸರಬರಾಜು ಮಾಡುತ್ತಿದ್ದರೆ, ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ಸರಬರಾಜು ಮಾಡಲಾಗುತ್ತದೆ. ಅದೂ ಕೆಲವು ಸೆಕ್ಟರ್‌ಗಳಲ್ಲಿ ಸರಿಯಾಗಿ ಬರುವುದಿಲ್ಲ.

ಬನ್ನಿದಿನ್ನಿ ಬ್ಯಾರೇಜ್‌ನಲ್ಲಿ ಈಗ ನೀರಿನ ಮಟ್ಟ 512 ಮೀಟರ್ ಇದ್ದು, 509 ಮೀಟರ್‌ಗೆ ಇಳಿದರೆ ಡೆಡ್‌ ಸ್ಟೋರೇಜ್‌ ತಲುಪಲಿದೆ. ಬನ್ನಿದಿನ್ನಿ ಬ್ಯಾರೇಜು 0.107 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈಗ 0.06 ಟಿಎಂಸಿ ಅಡಿಯಷ್ಟು ನೀರಿದೆ. ಮೇ 20ರವರೆಗೆ ನೀರಿಗೆ ತೊಂದರೆಯಾಗುವುದಿಲ್ಲ. ಬಿಸಿಲಿನ ತಾಪ ಹೆಚ್ಚಿರುವುದರಿಂದ ನೀರು ಆವಿಯಾಗುವ ಪ್ರಮಾಣ ಹೆಚ್ಚಾಗಬಹುದು ಎಂದು ಮಿತ ಬಳಕೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ADVERTISEMENT

ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸಲಾಗಿತ್ತು. ಕುಡಿಯುವ ನೀರಿಗಾಗಿ ಹರಿಸಿದ್ದ ನೀರು ಬನಿದಿನ್ನಿ ಬ್ಯಾರೇಜ್‌ ಭರ್ತಿಯಾಗುವವರೆಗೂ ಬರಬೇಕಿತ್ತು. ಆದರೆ, ಮೇಲ್ಭಾಗದಲ್ಲಿ ಅನ್ಯಕಾರ್ಯಕ್ಕೆ ಬಳಿಸಿದ್ದರಿಂದ ಒಂದು ಮೀಟರ್‌ನಷ್ಟೇ ನೀರು ಬಂದಿದೆ. ಜಿಲ್ಲಾಡಳಿತವು ನದಿ ದಂಡೆಯಲ್ಲಿ ಅನ್ಯ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳದ ಪರಿಣಾಮ ನವನಗರದ ಜನತೆ ಕುಡಿಯುವ ನೀರಿನ ತೊಂದರೆ ಎದುರಿಸಬೇಕಾಗಿದೆ.

2001ರಲ್ಲಿ 1.25 ಲಕ್ಷ ಜನರನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. 2021ರ ವೇಳೆಗೆ 1.75 ಲಕ್ಷ ಜನರಿಗೆ ಹೆಚ್ಚಿಸಲಾಗಿತ್ತು. ನವನಗರದ ಎರಡೂ ಯುನಿಟ್‌, ಸೀಮಿಕೇರಿ, ಗದ್ದನಕೇರಿ, ಗದ್ದನಕೇರಿ ತಾಂಡಾ ಸೇರಿದಂತೆ ಐದು ಗ್ರಾಮ ಹಾಗೂ ಐದು ಪುನರ್‌ವಸತಿ ಕೇಂದ್ರಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಕುಡಿಯುವ ನೀರಿನ ಪೂರೈಕೆ ಪ್ರಮಾಣ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿಗುಂಟ ಘಟಪ್ರಭಾ ನದಿ ಸೇತುವೆ ಮೇಲಿನಿಂದ ಪೈಪ್‌ಲೈನ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಹೆದ್ದಾರಿ ಹಾಗೂ ಸೇತುವೆ ಮೇಲೆ ಪೈ‍ಪ್‌ಲೈನ್‌ ನಿರ್ಮಾಣಕ್ಕೆ ಅನುಮತಿ ದೊರೆಯದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ಸಮಸ್ಯೆ ಉಲ್ಬಣಕ್ಕೆ ಕಾರಣಗಳಲ್ಲೊಂದಾಗಿದೆ.

ಹೆರಕಲ್‌ ಬ್ಯಾರೇಜ್‌ ಅನ್ನು 517 ಮೀಟರ್‌ಗೆ ಹೆಚ್ಚಿಸಿರುವುದರಿಂದ ಅಲ್ಲಿ ಐದು ಮೀಟರ್‌ನಷ್ಟು ಡೆಡ್‌ ಸ್ಟೋರೇಜ್‌ ನೀರು ದೊರೆಯಲಿದೆ. ಅಲ್ಲಿಂದ ನೀರು ಲಿಫ್ಟ್‌ ಮಾಡಲು ವ್ಯವಸ್ಥೆ ಇದೆ. ಅದಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಬಿಲ್‌ ಪಾವತಿಸಬೇಕಾಗುತ್ತದೆ. ಹಾಗಾದರೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಬಿಟಿಡಿಎ ಅಧಿಕಾರಿಗಳು.

ರಾಜ್ಯ ಸರ್ಕಾರ ಕಾರ್ಪಸ್‌ ಫಂಡ್ ವಾಪಸ್‌ ಪಡೆದ ಮೇಲೆ ನವನಗರ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ. ನವನಗರವನ್ನು ನಗರಸಭೆಗೆ ಹಸ್ತಾಂತರಿಸುವ ವಿಷಯ ನನೆಗುದಿಗೆ ಬಿದ್ದಿದೆ. ಪರಿಣಾಮ ನೀರಿನ ತೊಂದರೆ ಎದುರಾಗಿದೆ.

ಹೆರಕಲ್‌ ಬಳಿ ಜಾಕ್‌ವೆಲ್‌ ನಿರ್ಮಿಸುವ ಕಾರ್ಯ ನಡೆದಿದೆ. ಆ ಕಾಮಗಾರಿ ಪೂರ್ಣಗೊಂಡರೆ, 65 ಎಂಎಲ್‌ಡಿ ನೀರು ದೊರೆಯಲಿದೆ. 2051ರವರೆಗೆ 5.51 ಲಕ್ಷ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ. ಜತೆಗೆ ನಿತ್ಯವೂ ನೀರು ಪೂರೈಸಬಹುದಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನೀರಿನ ಸಮಸ್ಯೆ ಪರಿಹಾರ ದೊರಕುವ ಲಕ್ಷಣಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.