ADVERTISEMENT

ಕಾನೂನು ಓದಿದವರು ಸಂವಿಧಾನ ಎತ್ತಿ ಹಿಡಿಯಲಿ: ಶಾಸಕ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 2:37 IST
Last Updated 23 ಸೆಪ್ಟೆಂಬರ್ 2025, 2:37 IST
ಇಳಕಲ್ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನೂತನ ಶ್ರೀ ವಿಜಯ ಮಹಾಂತೇಶ ಕಾನೂನು ಮಹಾವಿದ್ಯಾಲಯವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಗುರುಮಹಾಂತ ಶ್ರೀ, ಶಿವರುದ್ರಪ್ಪ ಗೊಂಗಡಶೆಟ್ಟಿ, ಎಂ.ವಿ.ಪಾಟೀಲ, ದಿಲೀಪ ದೇವಗಿರಿಕರ ಇದ್ದರು.
ಇಳಕಲ್ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನೂತನ ಶ್ರೀ ವಿಜಯ ಮಹಾಂತೇಶ ಕಾನೂನು ಮಹಾವಿದ್ಯಾಲಯವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಗುರುಮಹಾಂತ ಶ್ರೀ, ಶಿವರುದ್ರಪ್ಪ ಗೊಂಗಡಶೆಟ್ಟಿ, ಎಂ.ವಿ.ಪಾಟೀಲ, ದಿಲೀಪ ದೇವಗಿರಿಕರ ಇದ್ದರು.   

ಇಳಕಲ್: ಕಾನೂನು ವ್ಯಾಸಂಗ ಮಾಡಿ, ವಕೀಲರಾದ ನಂತರ ಅಂಬೇಡ್ಕರ್ ಅವರು ನೀಡಿದ ಭಾರತದ ಸಂವಿಧಾನವನ್ನು ಎತ್ತಿ ಹಿಡಿಯುವ ಹಾಗೂ ಸಂವಿಧಾನಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸುವ ಕೆಲಸ ಮಾಡಬೇಕು' ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಅವರು ಸೋಮವಾರ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನೂತನ ಶ್ರೀ ವಿಜಯ ಮಹಾಂತೇಶ ಕಾನೂನು ಮಹಾವಿದ್ಯಾಲಯದ ಉದ್ಘಾಟಿಸಿ ಮಾತನಾಡಿದರು. ‘ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘವು ಈ ಭಾಗದ ಲಕ್ಷಾಂತರ ಜನರನ್ನು ವಿದ್ಯಾವಂತರನ್ನಾಗಿ ಮಾಡಿದೆ.‌ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವ್ಯಕ್ತಿಗಳು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ. ಜ್ಞಾನ ದಾಸೋಹದ ಪರಂಪರೆ ಮುಂದೆ ಸಾಗಬೇಕು. ಸಂಘದಿಂದ ಹೊಸ ಕೋರ್ಸಗಳನ್ನು ತರಬೇಕು. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ನಿಟ್ಟಿನಲ್ಲಿ ಸಂಘದಿಂದ ಪ್ರಯತ್ನಿಸಬೇಕು. ಈ ಕಾರ್ಯಕ್ಕೆ ನನ್ನಿಂದಾಗುವ ಸಹಾಯ ಸಹಕಾರವನ್ನು ನೀಡುತ್ತೇನೆ' ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರುಮಹಾಂತ ಶ್ರೀಗಳು ಮಾತನಾಡಿ, 'ಪ್ರತಿಯೊಬ್ಬ ನಾಗರಿಕರಿಗೂ ಕಾನೂನು ಅರಿವು ಇರಬೇಕು. ನಮಗೆ ಅಗತ್ಯವಿದ್ದಷ್ಟು ನಮ್ಮ ದೇಶದ ಕಾನೂನು ತಿಳಿದುಕೊಳ್ಳಬೇಕು. ನೂತನ ಕಾನೂನು ವಿದ್ಯಾಲಯ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು' ಎಂದರು.

ADVERTISEMENT

ನಿವೃತ್ತ ನ್ಯಾಯಾಧೀಶ ಎನ್. ಶರಣಪ್ಪ ಮಾತನಾಡಿ, 'ಜಗತ್ತಿನಲ್ಲಿ ಇಂದಿಗೂ ನ್ಯಾಯಾಲಯ ಹಾಗೂ ನ್ಯಾಯಾಧೀಶರ ಬಗ್ಗೆ ಗೌರವವಿದೆ. ಚೆನ್ನಾಗಿ ಕಾನೂನು ಓದಿ, ಪ್ರಾಮಾಣಿಕ ನಡುವಳಿಕೆ ರೂಢಿಸಿಕೊಂಡರೆ ಉನ್ನತ ಸ್ಥಾನಕ್ಕೇರುತ್ತೀರಿ' ಎಂದರು.
ಸಂಘದ ನಿರ್ದೇಶಕರಾದ ಎಂ.ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ವಿಮವಿವ ಸಂಘದ ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ, ಉಪಾಧ್ಯಕ್ಷರಾದ ಸಿ.ಪಿ. ಸಾಲಿಮಠ ಹಾಗೂ ರತ್ನಾಕರ ಹೂಲಿ ಉಪಸ್ಥಿತರಿದ್ದರು. ಸಹನಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ದಿಲೀಪ ದೇವಗಿರಕರ ಸ್ವಾಗತಿಸಿದರು. ಪ್ರಾಚಾರ್ಯೆ ಡಾ.ಸಂಧ್ಯಾ ಎಚ್.ವ್ಹಿ ವಂದಿಸಿದರು. ಸಂಗಣ್ಣ ಗದ್ದಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.