ಮುಧೋಳ: ‘ಗಣೇಶ ಚತುರ್ಥಿ, ಹೋಳಿ, ದೀಪಾವಳಿಯಂತಹ ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಸರ್ಕಾರ, ಪರಿಸರವಾದಿಗಳು, ಪ್ರಾಣಿ ದಯಾ ಸಂಘದವರು ಹತ್ತಾರು ನಿಯಮ ಹೊರಡಿಸಿ ಕಾನೂನು ಹಾಕುತ್ತೀರಾ, ಅದೇ ಮುಸ್ಲಿಂ ಹಬ್ಬವಾದ ಬಕ್ರೀದ್‌ನಲ್ಲಿ ಪ್ರಾಣಿ ವಧೆ ತಡೆಯದೆ ಮೌನವಾಗಿರುತ್ತೆ. ನಿಮ್ಮಂತವರಿಂದ ನಾವು ಶಾಂತಿ ಪಾಠ ಕಲಿಯಬೇಕಿಲ್ಲ’ ಎಂದು ಹಿಂದೂ ಸಂಘಟನೆ ಮುಖಂಡ ಪುನಿತ್ ಕೆರೆಹಳ್ಳಿ ಸರ್ಕಾರದ ಕ್ರಮ ಟೀಕಿಸಿದರು.
ನಗರದಲ್ಲಿ ಶನಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸ್ವತಂತ್ರ ಭಾರತದಲ್ಲಿ ನಮ್ಮ ಮಕ್ಕಳ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಕಲಿಸುತ್ತಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತನೆ ಮಾಡುವ ಅಗತ್ಯತೆ ಇದೆ’ ಎಂದರು.
‘ಒಬ್ಬರ ನಂತರ ಒಬ್ಬರಂತೆ ಮುಸ್ಲಿಂ ರಾಜರು ಮುಕ್ಕಾಲು ಭಾಗ ಭಾರತವನ್ನು ವಶಪಡಿಸಿಕೊಂಡಿದ್ದ ವೇಳೆಯಲ್ಲಿ, ದಕ್ಷಿಣ ಭಾರತದಲ್ಲಿ ಜಹಾಗೀರದಾರನ ಮಗನಾಗಿ ಹುಟ್ಟಿದ ಛತ್ರಪತಿ ಶಿವಾಜಿ ಮಹಾರಾಜ ಹಿಂದೂ ಧರ್ಮ ರಕ್ಷಿಸಿದರು’ ಎಂದು ತಿಳಿಸಿದರು.
ಕೊಲ್ಹಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಮಾತನಾಡಿ, ‘ನಮ್ಮ ದೇಶದ ಮೇಲೆ ದೊಡ್ಡ ಆಕ್ರಮಣ ಮಾಡಿದ್ದು ಮೊಘಲರು. ಅತ್ಯಾಚಾರ, ಅನ್ಯಾಯ ಮಾಡಿ ಹಿಂದೂ ಸಂಸ್ಕೃತಿ ಹಾಳುಮಾಡಿ ಮುಸ್ಲಿಂ ಸಂಸ್ಕೃತಿ ಬೆಳೆಸಲು ಪ್ರಯತ್ನಿಸಿದರು. ಆದರೆ ಶಿವಾಜಿ ಮಹಾರಾಜರು ತುರ್ಕರನ್ನು ತಡೆದು ಹಿಂದೂ ಸಂಸ್ಕೃತಿ ಉಳಿಸಿದರು’ ಎಂದು ಹೇಳಿದರು.
ಕಾರ್ಕಳದ ಪ್ರಶಾಂತ ಶೆಟ್ಟಿ, ಶಿರೋಳದ ಶಂಕರಾರೂಢ ಶ್ರೀ ಮಾತನಾಡಿದರು.
ಶ್ರೀಶೈಲಗೌಡ ಪಾಟೀಲ, ಕಲ್ಮೇಶ ಗೋಸಾರ, ಬಸವರಾಜ ಮಹಾಲಿಂಗೇಶ್ವರಮಠ, ನಗರಸಭೆ ಸದಸ್ಯ ಗುರುಪಾದ ಕುಳಲಿ, ಸದಾ ಜಾಧವ, ಪ್ರದೀಪ ನಿಂಬಾಳಕರ, ಅನಂತರಾವ ಘೋರ್ಪಡೆ, ಬಸವಂತ ಕಾಟೆ, ಸುನೀಲ ನಿಂಬಾಳ್ಕರ, ಶ್ಯಾಮ ನಿಂಬಾಳ್ಕರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.