ADVERTISEMENT

ಜಾನುವಾರು ಪ್ರಾಂಗಣ ಮರು ಆರಂಭಕ್ಕೆ ನಿರ್ಧಾರ

ಎಪಿಎಂಸಿ ಸಾಮಾನ್ಯ ಸಭೆ: ಕಾಮಗಾರಿಗೆ ಟೆಂಡರ್ ಕರೆಯಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 4:25 IST
Last Updated 7 ಆಗಸ್ಟ್ 2025, 4:25 IST
ಮಹಾಲಿಂಗಪುರದ ಜಾನುವಾರು ಮಾರುಕಟ್ಟೆ ಪ್ರಾಂಗಣವನ್ನು ಎಪಿಎಂಸಿ ಆಡಳಿತ ಮಂಡಳಿ ಪರಿಶೀಲನೆ ನಡೆಸಿತು
ಮಹಾಲಿಂಗಪುರದ ಜಾನುವಾರು ಮಾರುಕಟ್ಟೆ ಪ್ರಾಂಗಣವನ್ನು ಎಪಿಎಂಸಿ ಆಡಳಿತ ಮಂಡಳಿ ಪರಿಶೀಲನೆ ನಡೆಸಿತು   

ಮಹಾಲಿಂಗಪುರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಾನುವಾರು ಮಾರುಕಟ್ಟೆ ಪ್ರಾಂಗಣವನ್ನು ಸ್ವಚ್ಛಗೊಳಿಸಿ ಮರು ಆರಂಭಿಸಲು ನೂತನ ಆಡಳಿತ ಮಂಡಳಿ ನಿರ್ಧರಿಸಿದೆ.

‘ಪ್ರಜಾವಾಣಿ’ಯಲ್ಲಿ ಆ.4ರಂದು ‘ಜಾನುವಾರು ಪ್ರಾಂಗಣದಲ್ಲಿ ಸ್ವಚ್ಛತೆ ಮಾಯ’ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯನ್ನು ಉಲ್ಲೇಖಿಸಿ ಕಾರ್ಯದರ್ಶಿ ಡಿ.ಜಿ.ಪಟ್ಟಣಶೆಟ್ಟಿ ಮಾತನಾಡಿ, ಜಾನುವಾರು ಮಾರುಕಟ್ಟೆ ಪ್ರಾಂಗಣ ಪಾಳು ಬಿದ್ದಿರುವ ಕುರಿತು ಸಭೆ ಗಮನಸೆಳೆದರು.

ಪ್ರಾಂಗಣ ಅಭಿವೃದ್ಧಿಗೆ ಐದು ಜನ ಸದಸ್ಯರ ಸಮಿತಿ ರಚಿಸಿ ಸ್ವಚ್ಛಗೊಳಿಸುವುದು, ಅಗತ್ಯ ನೀರಿನ ಸೌಲಭ್ಯ ಕಲ್ಪಿಸುವುದು, ಕಂಪೌಂಡ್ ದುರಸ್ತಿಗೊಳಿಸುವುದು, ನಂತರ ಪ್ರಾಂಗಣದಲ್ಲಿ ದನ, ಆಡು, ಕುರಿಗಳ ಖರೀದಿಗೆ ಖರೀದಿದಾರರ ಮನವೊಲಿಸಲು ಸಭೆ ಅನುಮೋದನೆ ನೀಡಿತು.

ADVERTISEMENT

ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿರುವ ಅತಿಥಿಗೃಹದ ಎರಡು ಕೋಣೆಗಳ ಶೌಚಾಲಯದ ಚೇಂಬರ್ ನಿರ್ಮಾಣ, ವಿದ್ಯುತ್ ಸೌಲಭ್ಯ ಕಲ್ಪಿಸಲು ತುಂಡು ಕಾಮಗಾರಿಗಳನ್ನಾಗಿ ಕೈಗೆತ್ತಿಕೊಳ್ಳಲು ಸಭೆ ನಿರ್ಧರಿಸಿತು.

ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಸಭೆ ಹಾಗೂ ಪ್ರಯಾಣ ಭತ್ಯೆ ದರಗಳಿಗೆ ಒಪ್ಪಿಗೆ ನೀಡಲಾಯಿತು. 2025-26ನೇ ಸಾಲಿಗೆ ಮುಖ್ಯ ಮಾರುಕಟ್ಟೆ ಪ್ರಾಂಗಣದ ಆಡಳಿತ ಕಚೇರಿ ಹಾಗೂ ತೇರದಾಳ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 5 ಜನ ಸಿಬ್ಬಂದಿಗೆ ವಿವಿಧ ವರ್ಗೀಕರಣದಲ್ಲಿ ಹೊರಗುತ್ತಿಗೆ ಆಧಾರದಡಿ ದರ ನಿಗದಿಪಡಿಸಿ ಭದ್ರತಾ ಸಂಸ್ಥೆಗಳಿಂದ ಸೇವೆ ಪಡೆಯಲು ಟೆಂಡರ್ ಆಹ್ವಾನಿಸಲು ಸಭೆ ಅನುಮೋದನೆ ನೀಡಿತು.

ತೇರದಾಳ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಕುರಿ ಹಾಗೂ ಮೇಕೆ ಸಂತೆ ನಡೆಸಲು ಪ್ರಾಂಗಣದಲ್ಲಿ ಖಾಲಿ ಜಾಗ ನೀಡುವಂತೆ ಅಲ್ಲಿನ ಪುರಸಭೆ ಮುಖ್ಯಾಧಿಕಾರಿಗೆ ವಿನಂತಿಸಿರುವ ಕುರಿತು ಕಾರ್ಯದರ್ಶಿ ತಿಳಿಸಿದಾಗ, ಜಾಗದ ಲಭ್ಯತೆಯ ಕುರಿತು ಪರಿಶೀಲನೆ ಮಾಡಿ ನಂತರ ಮಾರುಕಟ್ಟೆಗೆ ಸ್ಥಳವಕಾಶ ಒದಗಿಸಲು ಕ್ರಮ ಜರುಗಿಸಲು ಸದಸ್ಯರು ತಿಳಿಸಿದರು.

ಮಹಾಲಿಂಗಪುರ ಮುಖ್ಯ ಪ್ರಾಂಗಣ ಹಾಗೂ ತೇರದಾಳ ಉಪಪ್ರಾಂಗಣದ ವಿವಿಧ ಕಟ್ಟಡಗಳಿಗೆ ಇಲಾಖಾ ಎಂಜಿನೀಯರ್‍ರಿಂದ ದರ ನಿಗದಿಪಡಿಸಿಕೊಳ್ಳಲು, 2024-25ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗೆ ಟೆಂಡರ್ ಕರೆಯಲು ಸಭೆ ಒಪ್ಪಿಗೆ ನೀಡಿತು.

ಅಧ್ಯಕ್ಷ ದೇವಲ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಸದಸ್ಯರಾದ ಮಹೇಶ ಚಿಚಖಂಡಿ, ಉಮೇಶ ಪೂಜೇರಿ, ದುಂಡಪ್ಪ ಜಾಧವ, ರಾಮಪ್ಪ ಉಳ್ಳಾಗಡ್ಡಿ, ಭರತೇಶ ಶಿರಹಟ್ಟಿ, ಲಕ್ಷ್ಮೀಬಾಯಿ ಹುಂಡರಗಿ, ಹೊಳಬಸಪ್ಪ ತಳವಾರ, ಗುರುನಾಥ ಕಾಂಬಳೆ, ಸಿದ್ದಪ್ಪ ಸೋರಗಾಂವಿ, ಸಿದ್ದಪ್ಪ ಜಳಕಿ, ವಿನಯ ಚಮಕೇರಿ, ವಿಜಯಪುರ ಉಪವಿಭಾಗದ ಎಇಇ ಎಲ್.ಬಿ.ಲಮಾಣಿ, ಸೆಕ್ಸನ್ ಅಧಿಕಾರಿ ಬಾಪುಗೌಡ ಪಾಟೀಲ ಇದ್ದರು.

ಮಹಾಲಿಂಗಪುರದ ಜಾನುವಾರು ಮಾರುಕಟ್ಟೆ ಪ್ರಾಂಗಣವನ್ನು ಎಪಿಎಂಸಿ ಆಡಳಿತ ಮಂಡಳಿ ಪರಿಶೀಲನೆ ನಡೆಸಿತು

- ಪ್ರಾಂಗಣ ಖುದ್ದು ಪರಿಶೀಲನೆ

ಎಪಿಎಂಸಿಗೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಸಾಮಾನ್ಯ ಸಭೆ ನಡೆದಿದ್ದು ಸಭೆ ಮುಗಿದ ಮೇಲೆ ನೂತನ ಆಡಳಿತ ಮಂಡಳಿ ಜಾನುವಾರು ಮಾರುಕಟ್ಟೆ ಪ್ರಾಂಗಣಕ್ಕೆ ಖುದ್ದು ತೆರಳಿ ಅಲ್ಲಿನ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿತು. ಅಲ್ಲಿನ ಪಶು ಆಸ್ಪತ್ರೆ ಗೂಟದ ಕಲ್ಲು ಕ್ಯಾಟಲ್ ಶೆಡ್ ನೀರಿನ ಟ್ಯಾಂಕ್ ನೀರಿನ ಕೊಳ ಕಂಪೌಂಡ್ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಪ್ರಥಮ ಆದ್ಯತೆಯಾಗಿ ಪ್ರಾಂಗಣ ಸ್ವಚ್ಛಗೊಳಿಸಿ ಮರು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಯದರ್ಶಿಗೆ ಆಡಳಿತ ಮಂಡಳಿ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.