
ಮಹಾಲಿಂಗಪುರ: ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ರೂಪಾ ಹೊಸಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ನೀಡಿದ ಅಂದಾಜು ₹45.86 ಲಕ್ಷ ವೆಚ್ಚದ ವಿವಿಧ 13 ಕಾಮಗಾರಿಗಳ ಠರಾವುಗಳನ್ನು ಅಂಗೀಕರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಅಗತ್ಯವಿರುವ ಸಾಮಾಗ್ರಿ ಖರೀದಿಸಿ ಪೂರೈಸುವುದು, ಪರಿಶಿಷ್ಟ ಪಂಗಡದ ಕುಟುಂಬದವರಿಗೆ ಸೋಲಾರ್ ವಾಟರ್ ಹೀಟರ್ ಅಳವಡಿಸುವುದು, ವೆಹಿಕಲ್ ಮೌಂಟೆಡ್ ಫಾಗಿಂಗ್ ಯಂತ್ರ ಅಳವಡಿಸುವುದು, ಬೀದಿದೀಪಗಳಿಗೆ ಎಲ್‍ಇಡಿ ದೀಪಗಳನ್ನು ಖರೀದಿಸುವುದು, ಪಟ್ಟಣದ ಕುಡಿಯುವ ನೀರಿನ ಸರಬರಾಜು ವಿಭಾಗಕ್ಕೆ ಅಗತ್ಯವಿರುವ ಮೋಟಾರ್ ಪಂಪ್‍ಸೆಟ್ ಇತರೆ ಸಾಮಗ್ರಿಗಳನ್ನು ಖರೀದಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಅಂಗೀಕರಿಸಿ ಅರ್ಹ ಗುತ್ತಿಗೆದಾರರ ಹೆಸರು ಹಾಗೂ ಸಲ್ಲಿಸಿದ ದರಗಳನ್ನು ಪ್ರಸ್ತುತಪಡಿಸಲಾಯಿತು.
ಮುಖ್ಯಾಧಿಕಾರಿಗಳ ಕಚೇರಿ ಬಾಡಿಗೆ ವಾಹನದ 2026-27ನೇ ಸಾಲಿನ ವಾರ್ಷಿಕ ಟೆಂಡರ್ ಕರೆಯಲಾಗಿದ್ದು, ವಾಹನದ ದರ ಮಂಜೂರಾತಿ ನೀಡುವ ಕುರಿತು, 2024-25ರ ಆರ್ಥಿಕ ಕಾರ್ಯಕ್ಷಮತೆ (ಎಪಿಎಆರ್) ಸಿದ್ಧಪಡಿಸುವ ಕುರಿತು, ಓಎಫ್‍ಸಿ ಕೇಬಲ್ ಮೊಬೈಲ್ ಟವರ್‍ಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ದರಗಳನ್ನು ನಿಗದಿಪಡಿಸಲು, 2026-27ನೇ ಸಾಲಿನ ಸಂತೆ ಕರ ಲೀಲಾವು ಕುರಿತು ಹಾಗೂ ಕಚೇರಿಯ ವಿವಿಧ ಶಾಖೆಯ ವಾರ್ಷಿಕ ಟೆಂಡರ್ ಕಡೆಯಲು ಸಭೆ ಅನುಮೋದನೆ ನೀಡಿತು.
2025-26ನೇ ಸಾಲಿನ ಎಸ್‍ಎಫ್‍ಸಿ, ಟಿಎಸ್‍ಪಿ ಶೇ 6.95ರ ಅನುದಾನದಡಿ ಸೋಲಾರ್ ವಾಟರ್ ಹೀಟರ್ ಅಳವಡಿಸುವ ಕುರಿತು 11 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಆಲ್ಮೇರಾ ಪ್ರಯೋಜನ ಪಡೆದಿರುವ 5 ಫಲಾನುಭವಿಗಳನ್ನು ಹೊರತುಪಡಿಸಿ ಉಳಿದ 6 ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸಭೆ ಸೂಚಿಸಿತು.
ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಕುರಿತು ಅಧ್ಯಯನ ಪ್ರವಾಸ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ವ ಸದಸ್ಯರ ಒಮ್ಮತದ ಮೇರೆಗೆ ಸ್ಥಳ ಗುರುತಿಸಿ ಪ್ರವಾಸ ಕೈಗೊಳ್ಳಲು ಸಭೆ ನಿರ್ಧರಿಸಿತು. ಮುಕ್ತಿ ವಾಹನದ ಬಾಡಿಗೆಯನ್ನು ಪರಿಷ್ಕರಿಸಿದ ಸಭೆಯು, ವಾಹನದ ಮೂಲಕ ಶವ ಸಾಗಾಟಕ್ಕೆ ₹500 ಹಾಗೂ ಜೆಸಿಬಿಗೆ ₹1 ಸಾವಿರ ಬಾಡಿಗೆ ನಿಗದಿಪಡಿಸಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸಹನಾ ಸಾಂಗಲೀಕರ, ಸ್ಥಾಯಿ ಸಮಿತಿ ಚೇರಮನ್ ಪ್ರವೀಣ ಭರಮನಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಎಂಜಿನೀಯರ್ ಪ್ರಶಾಂತ ಪಾಟೀಲ ವೇದಿಕೆ ಮೇಲಿದ್ದರು. ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.