ADVERTISEMENT

ಮಹಾಲಿಂಗಪುರ: ಬೀಗ ಜಡಿದ ಕೌಜಲಗಿ ನಿಂಗಮ್ಮ ರಂಗಮಂದಿರ

ಕಿತ್ತುಹೋದ ನಾಮಫಲಕ; ಅನೈತಿಕ ಚಟುವಟಿಕೆ ತಾಣ

ಪ್ರಜಾವಾಣಿ ವಿಶೇಷ
Published 15 ಜೂನ್ 2023, 0:09 IST
Last Updated 15 ಜೂನ್ 2023, 0:09 IST
ಮಹಾಲಿಂಗಪುರದ ಕೌಜಲಗಿ ನಿಂಗಮ್ಮ ರಂಗಮಂದಿರ ಬೀಗ ಜಡಿದಿರುವುದು.
ಮಹಾಲಿಂಗಪುರದ ಕೌಜಲಗಿ ನಿಂಗಮ್ಮ ರಂಗಮಂದಿರ ಬೀಗ ಜಡಿದಿರುವುದು.   

–ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 3.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೌಜಲಗಿ ನಿಂಗಮ್ಮ ರಂಗಮಂದಿರ ಕಳೆದ ಒಂದು ವರ್ಷದಿಂದ ಬೀಗ ಜಡಿದಿದೆ.

2022ರ ಮಾರ್ಚ್ 12 ರಂದು ಉದ್ಘಾಟನೆಗೊಂಡಿದ್ದ ಈ ರಂಗಮಂದಿರ ಈಗ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಮಂದಿರದ ಸುತ್ತಲೂ ಗಿಡಗಂಟಿಗಳು ಬೆಳೆದು ಸುತ್ತಲಿನ ಜಾಗೆ ಬಯಲು ಶೌಚವಾಗಿ ಮಾರ್ಪಾಡಾಗಿದೆ. ಉದ್ಘಾಟನೆಗೊಂಡು ಕೆಲವೇ ತಿಂಗಳಲ್ಲಿ ರಂಗಮಂದಿರಕ್ಕೆ ಬೀಗ ಹಾಕಲಾಗಿದ್ದು, ಈಗ ಭೂತ ಬಂಗಲೆಯಾಗಿ ಕಾಣುತ್ತಿದೆ. ರಂಗಮಂದಿರದ ನಾಮಫಲಕವೂ ಕಿತ್ತುಹೋಗಿದೆ.

ADVERTISEMENT

2014ರ ಏಪ್ರಿಲ್ 24ರಂದು 1.15 ಕೋಟಿ ರೂ. ವೆಚ್ಚದಲ್ಲಿ ಭೂಸೇನಾ ನಿಗಮದಿಂದ ಆರಂಭಗೊಂಡ ರಂಗಮಂದಿರ ಕಾಮಗಾರಿ ಹಲವು ಸಮಸ್ಯೆಗಳಿಂದ ವಿಳಂಬವಾಗಿ 2017ರಲ್ಲಿ ಕಾಮಗಾರಿ ಕಟ್ಟಡ ಮಾತ್ರ ಮುಗಿಯಿತು. ಕೆಲಸ ಅರ್ಧಕ್ಕೆ ನಿಂತಿದ್ದರಿಂದ ಅಂದಿನ ಶಾಸಕಿ ಉಮಾಶ್ರೀ, ಬಾಕಿ ಉಳಿದ ಕಾಮಗಾರಿಗೆ ಹೆಚ್ಚುವರಿ 2.05 ಕೋಟಿ ರೂ. ಮಂಜೂರು ಮಾಡಿಸಿ ರಂಗಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದರು. 2017ರಲ್ಲಿ ಆರಂಭಗೊಂಡ ಕಾಮಗಾರಿ 2022ರಲ್ಲಿ ಪೂರ್ಣಗೊಂಡು ಉದ್ಘಾಟನೆ ನೆರವೇರಿದೆ.

ರಂಗಮಂದಿರದಲ್ಲಿ ಕುಳಿತುಕೊಳ್ಳಲು ಸಮರ್ಪಕ ಆಸನ ವ್ಯವಸ್ಥೆ ಇರದೇ ಇರುವುದನ್ನು ಗಮನಿಸಿದ ಶಾಸಕ ಸಿದ್ದು ಸವದಿ, ಹಳೆಯ ಆಸನ ತೆಗೆಸಿದರು. ಹಳೆಯ ಆಸನಗಳಿಂದ ದೊರೆತ ಹಣದಿಂದ ಸುಖಾಸೀನ 110 ಆಸನಗಳನ್ನು ಅಳವಡಿಸಲಾಗಿದೆ. ಇನ್ನೂ ಆಸನಗಳ ಅಗತ್ಯ ಇರುವುದರಿಂದ 25ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಕೋರಿದಾಗ, ಸರ್ಕಾರ ಕೇಳಿದ ‘ಹಣ ಬಳಕೆ ಪ್ರಮಾಣ ಪತ್ರ’ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ಅನುದಾನ ಬಂದಿಲ್ಲ. ಉದ್ಘಾಟನೆಗೊಂಡ ನಂತರ ರಂಗಮಂದಿರವನ್ನು 2022ರ ಸೆ.30 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಲೋಕೋಪಯೋಗಿ ಇಲಾಖೆ ಹಸ್ತಾಂತರಿಸಿದೆ. ಆರಂಭದಲ್ಲಿ ಕೆಲ ಕಾರ್ಯಕ್ರಮಗಳು ನಡೆದಿದ್ದು ಬಿಟ್ಟರೆ ನಂತರದಲ್ಲಿ ಯಾವುದೇ ಕಾರ್ಯಕ್ರಮಗಳೇ ನಡೆದಿಲ್ಲ.

‘ಕಲಾವಿದರ ತವರೂರಾದ ಮಹಾಲಿಂಗಪುರದಲ್ಲಿ ಕಲಾವಿದರಿಗೆ ವೇದಿಕೆ ಕಲ್ಪಿಸಬೇಕಿದ್ದ ರಂಗಮಂದಿರ ಅನಾಥವಾಗಿರುವುದು ದುರದೃಷ್ಟಕರ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಬೀಗ ತೆರವು ಮಾಡಿ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು’ ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಆಗ್ರಹಿಸುತ್ತಾರೆ.

‘ರಂಗಮಂದಿರದ ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ಸ್ಥಳೀಯ ಸಂಸ್ಥೆಗೆ ಅವಕಾಶ ನೀಡದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರೇ ನಿರ್ವಹಣೆ ಮಾಡಬೇಕು. ಸ್ಥಳೀಯ ಸಂಸ್ಥೆಯಿಂದ ಸಮರ್ಪಕವಾಗಿ ನಿರ್ವಹಣೆ ಆಗುವುದಿಲ್ಲ’ ಎಂದು ಕಲಾವಿದ ಚನಮಲ್ಲ ಕರಡಿ ಹೇಳುತ್ತಾರೆ.

ನಾಲ್ಕು ತಿಂಗಳ ತರಬೇತಿಗೆ ಮೈಸೂರಿಗೆ ಬಂದಿದ್ದು, ಪ್ರಭಾರಿಯಾಗಿ ಇನ್ನೊಬ್ಬರು ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಸಂಸ್ಥೆಗೆ ರಂಗಮಂದಿರ ನಿರ್ವಹಣೆಗೆ ಹಸ್ತಾಂತರ ಮಾಡಲಿದ್ದಾರೆ. ಎರಡು ಬಾರಿ ರಂಗಮಂದಿರಕ್ಕೆ ಭೇಟಿ ನೀಡಿದ್ದೇನೆ. ಸ್ಥಳೀಯರು ಸಮಿತಿ ರಚನೆ ಮಾಡಿ ಹಸ್ತಾಂತರ ಮಾಡಬೇಕೆಂದು ಕೇಳಿದ್ದು, ಹಾಗೇ ಮಾಡಲು ಬರುವುದಿಲ್ಲ. ಲೋಕೋಪಯೋಗಿ ಇಲಾಖೆಯವರು ತಮ್ಮ ಇಲಾಖೆಗೆ ವಿಳಂಬವಾಗಿ ರಂಗಮಂಂದಿರ ಹಸ್ತಾಂತರ ಮಾಡಿದ್ದಾರೆ.
ಕರ್ಣಕುಮಾರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ
ಮಹಾಲಿಂಗಪುರದ ಕೌಜಲಗಿ ನಿಂಗಮ್ಮ ರಂಗಮಂದಿರ ಬೀಗ ಜಡಿದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.