ಕುಳಗೇರಿ ಕ್ರಾಸ್: ಸಮೀಪದ ಕಳಸ ಗ್ರಾಮದ ಮಲಪ್ರಭಾ ನದಿಯಲ್ಲಿ ಅಳವಡಿಸಿದ್ದ ನೀರೆತ್ತುವ ಯಂತ್ರವನ್ನು (ಕೃಷಿ ಪಂಪಸೆಟ್) ತೆಗೆಯಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ವಡವಟ್ಟಿ ಗ್ರಾಮದ ರಾಮನಗೌಡ ಬ. ಬೂದಿಹಾಳ (ಅಂಗಡಿ) (42) ಮೃತಪಟ್ಟವರು.
ವಡವಟ್ಟಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಕಳಸ ಗ್ರಾಮದ ಹೊರವಲಯದಲ್ಲಿರುವ ಮಲಪ್ರಭಾ ನದಿಯಲ್ಲಿ ಕೃಷಿ ಜಮೀನಿನ ಉಪ ಯೋಗಕ್ಕಾಗಿ ₹10 ಲಕ್ಷ ವೆಚ್ಚದಲ್ಲಿ ನೀರೆತ್ತುವ ಯಂತ್ರವನ್ನು ಅಳವಡಿಸಿದ್ದರು. ಹೊಟ್ಟೆಗೆ ಹಗ್ಗವನ್ನು ಕಟ್ಟಿಕೊಂಡು ನದಿ ನೀರಿನಲ್ಲಿ ಸಾಗಿದ ರಾಮನಗೌಡ ನೀರಿನಲ್ಲಿ ಸಾಗಿದಾಗ ಹೊಟ್ಟೆಗೆ ಕಟ್ಟಿದ ಹಗ್ಗ ಕಾಲಿಗೆ ಸಿಲುಕಿ ಸುತ್ತಿಕೊಂಡು ಪಕ್ಕದಲ್ಲಿ ತಂತಿಗೆ ಸಿಲುಕಿದ್ದರಿಂದ ಮೇಲಕ್ಕೆ ಬರಲಾಗಲಿಲ್ಲ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಅವಘಡ ನಡೆದಿದ್ದು ಬಾದಾಮಿ ತಹಶೀಲ್ದಾರ್ ಕಾವ್ಯಾಶ್ರೀ ಎಚ್. ಭೇಟಿ ನೀಡಿ ತಕ್ಷಣ ಅಗ್ನಿಶಾಮಕ ದಳದ ಜೊತೆ ಮಾತನಾಡಿ ಬೋಟ್ ತರಿಸಿ ಕಾರ್ಯಾಚರಣೆ ನಡೆಸಿದರು. ಕಳಸ ಗ್ರಾಮದ ಈಜುಗಾರರು ನೀರಿನಲ್ಲಿ ಸಾಗಿ ಸಂಜೆ 7ರ ಹೊತ್ತಿಗೆ ಮೃತದೇಹವನ್ನು ಹೊರ ತೆಗೆದರು.
ಉಪ ತಹಶೀಲ್ದಾರ್ ಮೋಮಿನ್, ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿ ಬಿ.ಎಂ. ಹಳ್ಳೂರ, ಸರಳಾ ಸೊಪ್ಪಿನ, ಗ್ರಾಮ ಸಹಾಯಕ ಮಹಾಂತೇಶ, ಯಲ್ಲಪ್ಪ ತಳವಾರ, ಗ್ರಾಮದ ವಿಠ್ಠಲಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಮೌನೇಶ ಕುಂಬಾರ, ಪ್ರಲ್ಹಾದ ಕುಲಕರ್ಣಿ, ಕಾಶಪ್ಪ ಮಾದರ, ಮುತ್ತಪ್ಪ ನುಂಗಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.