ಬಾಗಲಕೋಟೆ: ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಳ್ಳಬಟ್ಟಿ ಸಂಪೂರ್ಣ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಳ್ಳಬಟ್ಟಿ ನಿರ್ಮೂಲನೆ ಕುರಿತು ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಚಖಂಡಿ ಹಾಗೂ ಅಮೀನಗಡದಲ್ಲಿ ಮಾತ್ರ ಕಳ್ಳಬಟ್ಟಿ ಕೇಂದ್ರಗಳಿವೆ. ಈ ಭಾಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂದರು.
ಕಳ್ಳಬಟ್ಟಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ಬೇರೆ ಉದ್ಯೋಗ ಕೈಗೊಳ್ಳಲು ಅಗತ್ಯ ತರಬೇತಿ ನೀಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಅವರಿಗೆ ದೊರಕುವಂತೆ ಮಾಡಬೇಕು. ಹಂತ, ಹಂತವಾಗಿ ಕಳ್ಳಬಟ್ಟಿ ಸಂಪೂರ್ಣ ನಿರ್ಮೂಲನೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ‘ಕಳ್ಳಬಟ್ಟಿ ಸಂಪೂರ್ಣ ನಿರ್ಮೂಲ ಆಗಬೇಕು. ಕುಡಿತ ಕಡಿಮೆಯಾದರೆ ಮಾತ್ರ ಕಾನೂನು ವ್ಯವಸ್ಥೆ ಚೆನ್ನಾಗಿರಲು ಸಾಧ್ಯವಾಗುತ್ತದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುವುದು ಎಂದರು.
ಅಬಕಾರಿ ಉಪ ಆಯುಕ್ತ ಹನಮಂತಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ 2024 ಜುಲೈದಿಂದ ಇಲ್ಲಿಯವರೆಗೆ 1,903 ದಾಳಿಗಳನ್ನು ನಡೆಸಲಾಗಿದ್ದು, 495 ಪ್ರಕರಣಗಳನ್ನು ದಾಖಲಿಸಿ 495 ಆರೋಪಿಗಳನ್ನು ಬಂಧಿಸಲಾಗಿದೆ. 9,868 ಲೀಟರ್ ಮದ್ಯ, 18 ಲೀ ಹೊರ ರಾಜ್ಯದ ಮದ್ಯ, 4 ಲೀಟರ್ ಬಿಯರ್, 39 ಲೀ ಸೇಂದಿ, 467 ಲೀ ಕಳ್ಳಬಟ್ಟಿ ಸಾರಾಯಿ, 585 ಲೀಟರ್ ಬೆಲ್ಲದ ಕೊಳೆ ಹಾಗೂ ಒಂದು ಆಟೊ, ಒಂದು ಕಾರು, 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ರಚಿಸಿದ ಸ್ಥಾಯಿ ಸಮಿತಿ ಸಭೆಗಳನ್ನು ಮಾಡಿ ಕಳ್ಳಬಟ್ಟಿ ಸಂಪೂರ್ಣ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮೂಹಿಕವಾಗಿ ಅಬಕಾರಿ ದಾಳಿಗಳನ್ನು ಕೈಗೊಳ್ಳಲು ತಂಡಗಳನ್ನು ರಚಿಸಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಅಬಕಾರಿ ಉಪ ಅಧೀಕ್ಷಕ ಅನೀಲಕುಮಾರ ನಂದೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಲ್. ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.