ಬೀಳಗಿ: ‘ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಯೋಜನೆಗಳು ಸಫಲಗೊಳ್ಳಲು ಸಾಧ್ಯ’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಭೂಸುರಕ್ಷಾ ಯೋಜನೆಯಡಿ ಸರ್ಕಾರ ಕೊಡುವ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳ ಸುರಕ್ಷತೆ ಪ್ರಮುಖವಾಗಿದ್ದು, ದಾಖಲೆಗಳ ಡಿಜಟಿಲೀಕರಣ ವೇಳೆ ಯಾವುದೇ ಯಡವಟ್ಟು ಆಗಬಾರದು. ನಿರ್ಲಕ್ಷ್ಯ ಮಾಡಿದರೆ ರೈತರಿಗೆ ತೊಂದರೆ ಆಗಲಿದೆ. ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದರು.
‘ಸರ್ಕಾರವು ಜನರಿಗೆ ಸುಲಭವಾಗಿ ಮತ್ತು ವಿಳಂಬವಾಗದೆ ದಾಖಲೆ ಪತ್ರಗಳು ದೊರೆಯುವಂತೆ ಮಾಡಲು ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದೆ. ಭ್ರಷ್ಟಾಚಾರ ಮಾಡದೆ ಜನರಿಗೆ ಉತ್ತಮ ಸೇವೆ ನೀಡಬೇಕು’ ಎಂದು ತಿಳಿಸಿದರು.
ತಹಶೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ‘ತಾಲ್ಲೂಕಿನಲ್ಲಿ ಪಹಣಿಗೆ ಆಧಾರ ಜೋಡಣೆ ಕಾರ್ಯ ಶೇ 90ರಷ್ಟಾಗಿದೆ. ಇನ್ನು ಮುಂದೆ ಸರ್ಕಾರಿ ಆಸ್ತಿ ಸರ್ವೆ, ಬಗರ್ ಹುಕುಂ, ಬೆಳೆ ಕಟಾವು, ಜನನ– ಮರಣ ದಾಖಲಾತಿ, ಪ್ರಕೃತಿ ವಿಕೋಪ ಪರಿಹಾರ, ಬೆಳೆ ಸಮೀಕ್ಷೆಗೆ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ನಿಖರ ಅಂಕಿ ಸಂಖ್ಯೆಗಳನ್ನು ಬೇಗನೇ ತಿಳಿಯಲು ಸಾಧ್ಯ’ ಎಂದು ಹೇಳಿದರು.
ಗ್ರಾಮ ಆಡಳಿತಾಧಿಕಾರಿಗಳ ಪರವಾಗಿ ಶಿವಾನಂದ ಶಿರೋಳ ಮಾತನಾಡಿ, ‘ಸರ್ಕಾರ ನಮಗೆ ನೀಡುವ ಕೆಲಸಕ್ಕೆ ತಕ್ಕಂತೆ ಸಾಮಗ್ರಿಗಳನ್ನು ನೀಡಿರಲಿಲ್ಲ. ನಿರಂತರ ಹೋರಾಟದ ಫಲವಾಗಿ ಲ್ಯಾಪ್‌ಟಾಪ್ ನೀಡಿದ್ದಾರೆ. ಇದರಿಂದ ಜನರಿಗೆ ಸಮರ್ಪಕ ಸೇವೆ ನೀಡಲು ಅನುಕೂಲವಾಗಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಕೃಷಿ ಇಲಾಖೆ ಅಧಿಕಾರಿ ಶ್ರೀನಿವಾಸ ಪಾಟೀಲ, ತೋಟಗಾರಿಕೆ ಇಲಾಖೆಯ ವಿವೇಕಾನಂದ ಕೆರೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗವ್ವ ಹೊಸಮನಿ, ಸದಸ್ಯ ರಾಜೇಂದ್ರ ದೇಶಪಾಂಡೆ, ಪಡಿಯಪ್ಪ ತಿರಕನ್ನವರ, ಪಿಡಿಒ ಎನ್.ಬಿ.ದೆಸಂಗಿ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.