ಬಾದಾಮಿ: ರಾಜಕೀಯ ಮರು ಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯ ಎಂದು ಜೆಡಿಎಸ್ ಯುವ ಘಟಕ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಇಲ್ಲಿನ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆರೂರ ಏತ ನೀರಾವರಿಗೆ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅನುದಾನ ನೀಡಿದ್ದರು. ಅದನ್ನು ತಾವೇ ಮಾಡಿಸಿದ್ದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
2028ರ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿ ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ಮಾಡಲಾಗುತ್ತಿದ್ದು, ಮುಂಬರುವ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವ ಜನತೆಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದರು.
ರಾಜಕೀಯ ಹಿನ್ನಲೆ, ಶ್ರೀಮಂತಿಕೆ ಇಲ್ಲದ ವ್ಯಕ್ತಿ ಕ್ಷೇತ್ರದ ಜನರ ಪ್ರೀತಿ ಗೆದ್ದಿರುವ ಹನಮಂತ ಅವರನ್ನು ಮುಂದಿನ ಶಾಸಕರಾಗಿಸುವಲ್ಲಿ ಕಾರ್ಯಕರ್ತರು ಹೆಚ್ಚು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಸಿದ್ದರಾಮಯ್ಯರ ರಾಜಕೀಯ ಬದುಕಿಗೆ ಬಾದಾಮಿ ಜನತೆ ಮರುಜನ್ಮ ನೀಡಿದ್ದರು. ಕನಿಷ್ಠ ಕೃತಜ್ಞತಾ ಭಾವ ಇಲ್ಲದಿರುವುದು ಖೇದಕರ. ಗುಳೇದಗುಡ್ಡದಲ್ಲಿ ಜವಳಿ ಪಾರ್ಕ ಮಾಡಲಿ, ಮಲಪ್ರಭಾ ನದಿ ದಡದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಅನೇಕ ಕೆಲಸ ಮಾಡಬಹುದಿತ್ತು. ಯಾವುದನ್ನೂ ಮಾಡಲಿಲ್ಲ ಎಂದು ಟೀಕಿಸಿದರು.
ಗುಳೇದಗುಡ್ಡ, ಬಾದಾಮಿ ಹಾಗೂ ಗ್ರಾಮೀಣ ಕಾರ್ಯಕರ್ತರ ಪಡೆ ಸಂಘಟಿಸಿ, ಲಕ್ಷಕ್ಕೂ ಅಧಿಕ ಜನರನ್ನು ಸದಸ್ಯತ್ವ ಮಾಡಿಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ವೆಂಕಟರಾವ್ ನಾಡಗೌಡ್ರ ಮಾತನಾಡಿ, ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಮಾಜಿ ಸಚಿವ ಅಲ್ಕೋಡು ಹನಮಂತಪ್ಪ, ವಿಜಯಪುರ ಜಿಲ್ಲಾ ಅಧ್ಯಕ್ಷ ಬಸನಗೌಡ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಚಂದ್ರಶೇಖರ, ರಾಜುಗೌಡ, ಗುರುರಾಜ ಹುಣಸಿಮರದ, ರಾಜು ನಾಯಕ, ಸಿದ್ದು ಬಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.