
ಕೆರೂರ: ‘ಕೇಂದ್ರ ಸರ್ಕಾರ ನರೇಗಾ ಯೋಜನೆ ತಿದ್ದುಪಡಿ ಮಾಡಿ ಜಿ ರಾಮ ಜಿ ಎಂಬ ಹೊಸ ಯೋಜನೆ ಮಾಡುವ ಮೂಲಕ ಮಹಾತ್ಮ ಗಾಂಧೀಜಿಯನ್ನು ಮೋದಿ ಸರ್ಕಾರ ಎರಡನೇ ಬಾರಿ ಹತ್ಯೆ ಮಾಡಿದೆ’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಸಮೀಪದ ಹೂಲಗೇರಿ ಗ್ರಾಮದಲ್ಲಿ ಭಾನುವಾರ ನಡೆದ ‘ನರೇಗಾ ಬಚಾವೋ ಸಂಗ್ರಾಮ’ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದಲ್ಲಿ ದುಡಿಯುವ ಬಡ ವರ್ಗದ ಜನರ ಕೈಗಳನ್ನು ಕಸಿದುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಗಾಂಧೀಜಿಯವರ ‘ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ’ ಎಂಬ ಕನಸನ್ನು ಕೇಂದ್ರ ಸರ್ಕಾರ ನಾಶಮಾಡಿದೆ ಎಂದರು.
‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಪ್ರತಿಯೊಂದು ಹಳ್ಳಿಯ ಬಡ ಜನರು ನಿರುದ್ಯೋಗಿಯಾಗದೆ ಆರ್ಥಿಕವಾಗಿ ಶಕ್ತರಾಗಿರಲು ಆಗಿನ ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿತ್ತು. ಈಗ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಆರ್ಥಿಕ ಶಕ್ತಿ ಕಸಿದುಕೊಳ್ಳುವ ಮೂಲಕ ದೇಶದಲ್ಲಿ ನಿರುದ್ಯೋಗಿ ಸಂಖ್ಯೆ ಹೆಚ್ಚಳ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.
‘ತೆರಿಗೆ ವಂಚನೆ, ಐಟಿ ದಾಳಿ, ಇಡಿ ದಾಳಿ ನಡೆಸುವ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಹತ್ತಿಕ್ಕುವ ಹುನ್ನಾರು ನಡೆಸಿದೆ’ ಎಂದರು.
‘ನರೇಗಾ ಬಚಾವೋ ಸಂಗ್ರಾಮ’ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಭಾಗವಹಿಸಿ, ‘ದುಡಿಯುವ ಕೈಗಳಿಗೆ ಕೆಲಸ ಸಿಗುವರೆಗೂ ಹೋರಾಟ ನಡೆಸೋಣ’ ಎಂದು ಹೇಳಿದರು.
ಕುಮಾರ ಕಕರಡ್ಡಿ, ಅಶೋಕ ಕೋಪ್ಪದ, ಪರಶುರಾಮ ಯಂಡಿಗೇರಿ, ನಾರಾಯಣ ತಿಮ್ಮಾಪೂರ, ರಮೇಶ ಯಡಹಳ್ಳಿ, ಲಚ್ಚಪ್ಪ ಅರಕೇರಿ, ಧರ್ಮಣ್ಣ ಭಗವತಿ, ಸವಿತಾ ನಾಗಪ್ಪನವರ, ಗೀತಾ ಅರಕೇರಿ, ರತ್ನವ್ವ ವಡ್ಡರ, ನಾಗವ್ವ ರೆಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.