ಬೀಳಗಿ: ‘ಧರ್ಮವನ್ನು ಕೇಳಿ 27 ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ, ಪಾಕಿಸ್ತಾನದ ಹುಟ್ಟಡಗಿಸುವ ಕಾರ್ಯಮಾಡಿದೆ. ನಮ್ಮ ಭಾರತೀಯ ಸೇನೆಗೆ ವಿಜಯವಾಗಲಿ. ನಮ್ಮ ದೇಶದ ಸೈನಿಕರ ತಾಕತ್ತು ಪಾಕಿಸ್ತಾನಕ್ಕೆ ತಿಳಿಯಲಿ’ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಸ್ಥಳೀಯ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಿಜೆಪಿಯ ಮಂಡಲದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಸೇನೆಗೆ ಶಕ್ತಿ ತುಂಬಲು ಸೈನಿಕರ ಪರ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿದರು.
‘ಪ್ರವಾಸಿಗರ ಮೇಲೆ ಹೇಡಿಗಳ ರೀತಿಯಲ್ಲಿ ದಾಳಿ ಮಾಡಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ’ ಎಂದು ಬೀಳಗಿ ಬಿಜೆಪಿ ಮಂಡಲ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ ಹೇಳಿದರು.
‘ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ರಾಜತಾಂತ್ರಿಕ ನಡೆಯಿಂದಲೂ ಭಾರತ ದಿಗ್ಬಂಧನ ಹಾಕುತ್ತಿದೆ. ಸಿಂಧೂ ನದಿಯ ಹರಿವಿಗೆ ತಡೆಯೊಡ್ಡಿದೆ. ಪಾಕಿಸ್ತಾನ ಈಗಾಗಲೇ ಆರ್ಥಿಕ ಹಾಗೂ ರಾಜಕೀಯವಾಗಿ ದಿವಾಳಿ ಎದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿಗೂ ಹಾಹಾಕಾರ ಉಂಟಾದರೆ ಅಲ್ಲಿ ಆಂತರಿಕ ಕ್ಷೋಭೆ ಉಂಟಾಗಿ ಜನರು ದಂಗೆ ಏಳುವ ಸಮಯ ದೂರವಿಲ್ಲ’ ಎಂದು ವಿ.ಜಿ. ರೇವಡಿಗಾರ ಹೇಳಿದರು.
ಆಪರೇಷನ್ ಸಿಂಧೂರ ನಡೆಸಿದ ಸೈನಿಕರಿಗೆ ಜೈಕಾರ ಕೂಗಿದ ಪದಾಧಿಕಾರಿಗಳು, ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಎಂ.ಎಸ್. ಕೊಮಾರದೇಸಾಯಿ, ಮಲ್ಲಿಕಾರ್ಜುನ ಅಂಗಡಿ, ಎಂ.ಎಂ. ಶಂಬೊಜಿ ಮಾತನಾಡಿದರು.
ಎಸ್.ಎಂ. ಕಟಗೇರಿ, ರಾಮಣ್ಣ ಕಾಳಪ್ಪಗೋಳ, ಮುತ್ತು ಬೊರ್ಜಿ, ಬಸವಂತಪ್ಪ ಸಂಕಾನಟ್ಟಿ, ವಿಜಯಲಕ್ಷ್ಮಿ ಪಾಟೀಲ, ಅಕ್ಕಮಹಾದೇವಿ ಮೈಸೂರು, ವೀರಣ್ಣ ತೋಟದ, ಗಂಗಾಧರ ಕಲಬುರ್ಗಿ, ಸತೀಶ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.