ಬಾಗಲಕೋಟೆ: ನೌಕರರ ಎನ್‌ಪಿಎಸ್ ಸಮಸ್ಯೆ ಕುರಿತು ಚರ್ಚಿಸಲು ಆ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿದ್ದು, ಖಂಡಿತವಾಗಿಯೂ ಓಪಿಎಸ್ ಜಾರಿಯಾಗಲಿದೆ. ಈ ಬಗ್ಗೆ ಅನುಮಾನ ಬೇಡ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕಲಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಆಯುಷ್ ಸಂಜೀವಿನಿ ಯೋಜನೆ ಶೀಘ್ರದಲ್ಲಿಯೇ ಜಾರಿಗೆ ಬರುತ್ತದೆ. ಈ ಯೋಜನೆಡಿ ಉಚಿತ ಆರೋಗ್ಯ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ತಂದೆ-ತಾಯಿಗಳು ತಾವು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿರುತ್ತಾರೆ. ಮಕ್ಕಳು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಗುರಿ ಸಾಧನೆ ಮಾಡಬೇಕು. ಇಂಟರ್‌ನೆಟ್ ಅನ್ನು ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಭಾ ಪುರಸ್ಕಾರಕ್ಕೆ ವರ್ಷಕ್ಕೆ ₹3 ಕೋಟಿ ಖರ್ಚು ಮಾಡಲಾಗುತ್ತಿದೆ. ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದೇ ಸಂಘದ ಮುಖ್ಯ ಉದ್ದೇಶವಾಗಿದೆ. ಆರು ವರ್ಷಗಳ ಅವಧಿಯಲ್ಲಿ ನೌಕರರಿಗೆ ಅನುಕೂಲವಾಗುವ 26 ಆದೇಶಗಳನ್ನು ಮಾಡಿಸಲಾಗಿದೆ ಎಂದರು.
ಅನಾವಶ್ಯಕ ತೊಂದರೆ ಕೊಡುತ್ತಿದ್ದ ಅನಾಮಧೇಯ ಪತ್ರ, ಮೂಕ ಅರ್ಜಿಗಳು ಬಂದರೆ ಯಾವುದೇ ರೀತಿಯ ತನಿಖೆ ಮಾಡದಂತೆ ಸರ್ಕಾರ ಆದೇಶ ಮಾಡಿದೆ. ಈ ಮೊದಲು ವರ್ಷಕ್ಕೆ 10 ಸಿಎಲ್‍ಗಳು ಇದ್ದವು, ಈಗ ಅವುಗಳನ್ನು 15ಕ್ಕೆ ಹೆಚ್ಚಿಸಲಾಗಿದೆ. 6 ತಿಂಗಳವರೆಗೆ ಶಿಶುಪಾಲನಾ ರಜೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಾನಪದ ಗಾಯಕ ವೆಂಕಪ್ಪ ಸುಗತೇಕರ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ತಂದೆ-ತಾಯಿ ಧರ್ಮವಾಗಿದೆ. ಜ್ಞಾನದಿಂದ ಎಲ್ಲಾ ಸಂಪತ್ತು ಬರುತ್ತದೆ. ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಎಂ.ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್, ಪ್ರಧಾನ ಕಾರ್ಯದರ್ಶಿ ಗಿರಿಗೌಡ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಸಂಜೀವರಡ್ಡಿ ಸತ್ಯರಡ್ಡಿ, ಸುರೇಶ ಶೆಡಶ್ಯಾಳ, ರಾಮಕೃಷ್ಣ, ರಾಜೇಶ, ವಿಠ್ಠಲ ವಾಲಿಕಾರ ಪಾಲ್ಗೊಂಡಿದ್ದರು.
ಕಾಲೇಜು ಹಂತದಲ್ಲಿ ಡ್ರಗ್ಸ್ ಮಾಫಿಯಾ ಇದೆ. ಯುವ ಸಮೂಹ ಸವಾಲು-ಸಮಸ್ಯೆಗಳ ನಡುವೆ ಎಚ್ಚರಿಕೆಯಿಂದ ಸಾಧನೆ ಕಡೆಗೆ ಸಾಗಬೇಕು. ಪಾಲಕರ ಭರವಸೆ ಹುಸಿಗೊಳಿಸಬಾರದು.– ಸಿ.ಎಸ್. ಷಡಾಕ್ಷರಿ, ರಾಜ್ಯ ಅಧ್ಯಕ್ಷ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.