ಬೀಳಗಿ: ‘ತಾಲ್ಲೂಕಿನ ಸಹಕಾರ, ಶಿಕ್ಷಣ, ಔದ್ಯೋಗಿಕ, ವೈದ್ಯಕೀಯ ಕ್ಷೇತ್ರಗಳು ಸೇರಿದಂತೆ ಹಲವು ಕ್ಷೇತ್ರಗಳ ಪ್ರಥಮಗಳಿಗೆ ನಾಂದಿ ಹಾಡಿದವರು ಎಸ್.ಆರ್.ಪಾಟೀಲ’ ಎಂದು ಬಾಗಲಕೋಟೆಯ ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ನೀಲಪ್ಪನವರ ಹೇಳಿದರು.
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ರಜತಮಹೋತ್ಸವದ ಅಂಗವಾಗಿ ಬೀಳಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪತ್ತಿನ ಸಹಕಾರ ಸಂಘ ಹಾಗೂ ಸೌಹಾರ್ದ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಶನಿವಾರ ಏರ್ಪಡಿಸಿದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಸ್ವಂತ ಬಂಡವಾಳ ಹೆಚ್ಚಿಸಿಕೊಳ್ಳುವ ಮೂಲಕ ಕೃಷಿ ಸಾಲದ ಜೊತೆಗೆ ಕೃಷಿಯೇತರ ಸಾಲದ ಪ್ರಮಾಣ ಹೆಚ್ಚಿಸಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಮಾಡಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ‘ಬ್ಯಾಂಕಿನ ಪ್ರಾರಂಭೋತ್ಸವದ ದಿನ ಸಿದ್ದೇಶ್ವರ ಶ್ರೀ ಹೇಳಿದ ಅಮೂಲ್ಯವಾದ ಮಾತುಗಳನ್ನು ನಿರಂತರವಾಗಿ ಪರಿಪಾಲಿಸಿದ್ದರಿಂದ ಇಂದು ಬ್ಯಾಂಕ್ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು’ ಎಂದು ತಿಳಿಸಿದರು.
ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ ಪ್ರಾಸ್ತಾವಿಕ ಮಾತನಾಡಿದರು.
ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಹಕಾರ ಸಂಘಗಳ ಅಭಿವೃದ್ಧಿಪರ ಚಿಂತನೆಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
‘ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪಾತ್ರ’ ಕುರಿತು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಸೌಕಾರ ಮತ್ತು ‘ಕುಟುಂಬ ನಿರ್ವಹಣೆ ಮತ್ತು ಸಂಸ್ಕಾರ’ ವಿಷಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಲೂತಿ ಹಾಗೂ ‘ವ್ಯಕ್ತಿತ್ವ ವಿಕಸನಕ್ಕೆ ಜೀವನ ಕೌಶಲಗಳು’ ವಿಷಯದ ಕುರಿತು ಅಶೋಕ ಕೆಂಪಲಿಂಗನ್ನವರ ಉಪನ್ಯಾಸ ನೀಡಿದರು.
ಬಾಡಗಂಡಿ ಶಾಂತಾದೇವಿ ಮೆಮೊರಿಯಲ್ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಎ.ಎ.ಬಾಳಿಕಾಯಿ,ಅಧಿಕ್ಷಕ ಸಿ.ಆರ್.ಪೂಜಾರ,ಡಿಸಿಸಿ ಬ್ಯಾಂಕ್ ಅಧಿಕಾರಿ ಗಿರೀಶ ಸಂಶಿ, ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೆಲ್ನಾಡ, ನಿರ್ದೇಶಕರಾದ ಎಂ.ಎನ್.ಪಾಟೀಲ, ಹೆಮಾದ್ರಿ ಕೊಪ್ಪಳ,ಅಮಿನಸಾಬ ಬೀಳಗಿ, ನಿಂಗನಗೌಡ ಪಾಟೀಲ, ಕಲ್ಲಯ್ಯ ಪತ್ರಿ, ಗಂಗಣ್ಣ ಕೆರೂರ, ರಾಜಣ್ಣ ಬಾರಕೇರ, ಡಿ.ಬಿ.ಮಮದಾಪೂರ, ಭೀಮಪ್ಪ ಕೂಗಟಿ, ಬ್ಯಾಂಕಿನ ವ್ಯವಸ್ಥಾಪಕ ಜಿ.ಎಸ್.ಬನ್ನಟ್ಟಿ, ಶಾಹಿರ್ ಬೀಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.