ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಂಗಳವಾರ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸದಸ್ಯರು ಪ್ರತಿಭಟನೆ ಮಾಡಿದರು.
ಬಡತನ, ಹಸಿವು, ಅಪೌಷ್ಟಿಕತೆ, ನಿರುದ್ಯೋಗ ಹೆಚ್ಚಿಸುವ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಕಾರ್ಖಾನೆಗಳ ಲಾಭವು ಅನೇಕ ಪಟ್ಟು ಹೆಚ್ಚಿದ್ದರೂ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎಂದು ದೂರಿದರು.
ವಿದ್ಯುತ್ ಮಸೂದೆ ಹಿಂಪಡೆದುಕೊಳ್ಳಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಿ, ಪ್ರಿಪೇಡ್ ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಮಂಜೂರಾದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣ, ಆರೋಗ್ಯ, ನೀರು ಮತ್ತು ನೈರ್ಮಲ್ಯವನ್ನು ಉಚಿತವಾಗಿ ಒದಗಿಸಬೇಕು. ಹೊಸ ಶಿಕ್ಷಣ ನೀತಿ ರದ್ದುಪಡಿಸಬೇಕು. ವಸತಿ ಸೌಲಭ್ಯ ಖಾತರಿಗೊಳಿಸಬೇಕು. ಅರಣ್ಯ ಹಕ್ಕುಗಳ ಕಾಯ್ದೆ ನಿಯಮಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂತೆಗೆದುಕೊಂಡು ಉಳುವವರಿಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ಇ ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಎಲ್ಲ ಕಾರ್ಮಿಕರಿಗೆ ಆರೋಗ್ಯ, ಮಾತೃತ್ವ ಯೋಜನೆ ಸೌಲಭ್ಯಗಳನ್ನು ಕಲ್ಪಿಸಬೇಕು. ಶ್ರೀಮಂತರ, ಕಾರ್ಪೋರೇಟ್ ತೆರಿಗೆ ಹೆಚ್ಚಿಸಿ, ಸಂಪತ್ತು ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆ ಪುನಃ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಮಲಾ ತೇಲಿ, ಶೋಭಾ ಪಾಟೀಲ, ಅಂಜನಾ ಕುಂಬಾರ, ಶೀಲಾ ಮೆಳ್ಳಿಗೇರಿ, ರಮೇಶ ಗೌಡರ, ವಾಸಂತಿ ಪೂಜಾರಿ, ಸುನಿತಾ ಜಂಬಗಿ, ಎಲ್.ವೈ. ಯಲಹಟ್ಟಿ, ದಾನೇಶ್ವರ ವಜ್ಜರಮಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.