ADVERTISEMENT

ಬಾಗಲಕೋಟೆ: ಎರಡನೇ ದಿನವೂ ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 16:14 IST
Last Updated 3 ಸೆಪ್ಟೆಂಬರ್ 2024, 16:14 IST
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದನ್ನು ಖಂಡಿಸಿ ವಾಲ್ಮೀಕಿ ಮಹಾಸಭಾ ಸದಸ್ಯರು ಎರಡನೇ ದಿನವಾದ ಮಂಗಳವಾರೂ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದನ್ನು ಖಂಡಿಸಿ ವಾಲ್ಮೀಕಿ ಮಹಾಸಭಾ ಸದಸ್ಯರು ಎರಡನೇ ದಿನವಾದ ಮಂಗಳವಾರೂ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳದ್ದನ್ನು ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಎರಡನೇ ದಿನವಾದ ಮಂಗಳವಾರವೂ ಮುಂದುವರಿಯಿತು.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಭರವಸೆ ಪ್ರಕಾರ ಆದೇಶ ಪತ್ರಿ ನೀಡದ್ದರಿಂದ ಪ್ರತಿಭಟನೆ ಮುಂದುವರಿಸಲಾಯಿತು.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಹಾಗೂ ಅದನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದನ್ನು ಖಚಿತ ಪಡಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು. ಆಗ ಸ್ಥಳಕ್ಕೆ ಬಂದ ಪ್ರಭಾರ ಎಡಿಸಿ ಸಂತೋಷ ಜಗಲಾಸರ, ಸೆ. 22ರಂದು ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವುದನ್ನು ಪರಿಶೀಲಿಸಲು ಸೂಚಿಸಿರುವ ಪತ್ರ ನೀಡಿದರು.

ADVERTISEMENT

ಪತ್ರದ ಪ್ರಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮಾತುಕತೆ ನಡೆಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ವಾಲ್ಮೀಕಿ ಮಹಾಸಭಾ ಅಧ್ಯಕ್ಷ ದ್ಯಾಮಣ್ಣ ಗಾಳಿ, ರಾಜು ನಾಯ್ಕರ್, ಪ್ರಕಾಶ ನಾಯ್ಕರ, ಲಕ್ಷ್ಮಣ ಮಾಲಗಿ, ಗೋವಿಂದ ಕೌಲಗಿ, ಲಕ್ಷಣ ಮರಡಿತೋಟದ, ಮಲ್ಲಿಕಾರ್ಜುನ್ ಸುರಪುರ, ಮಹದೇವ ನಾಯಕ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಮಾಜದ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ: ವಿವಿಧ ಕಂಪನಿಗಳಲ್ಲಿ ಠೇವಣಿ ಇಟ್ಟು ಮೋಸ ಹೋಗಿರುವ ಜನರಿಗೆ ಠೇವಣಿ ಹಣ ಮರು ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಠೇವಣಿದಾರ ಕುಟುಂಬದ ಸದಸ್ಯರು ಎರಡನೇ ದಿನವಾದ ಮಂಗಳವಾರವೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮುಂದುವರಿಸಿದರು.

‘ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡಿದ್ದೇವೆ. ಠೇವಣಿದಾರರು ಹಾಗೂ ಏಜೆಂಟರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಧಾನಮಂತ್ರಿಯೇ ಭರವಸೆ ನೀಡಿದ್ದರು. ಇಂದಿಗೂ ಈಡೇರಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.