ADVERTISEMENT

ಬಾಗಲಕೋಟೆ| ಅಲೆಮಾರಿಗಳಿಗೆ ಕಾಲಮಿತಿಯೊಳಗೆ ಮೂಲಸೌಲಭ್ಯ ಕಲ್ಪಿಸಿ: ಪಲ್ಲವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:00 IST
Last Updated 23 ನವೆಂಬರ್ 2025, 5:00 IST
ಪಲ್ಲವಿ
ಪಲ್ಲವಿ   

ಬಾಗಲಕೋಟೆ: ಅಲೆಮಾರಿ ಸಮುದಾಯಗಳಿಗೆ ಮೂಲಸೌಲಭ್ಯ ಕಲ್ಪಿಸದಿರುವುದು ಕಂಡು ಬಂದಿದೆ. ಕಾಲಮಿತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಗ್ರಾಮಗಳ ಅಲೆಮಾರಿ ಸಮುದಾಯದವರು ವಾಸಿಸುವ ಕಾಲೊನಿಗಳಿಗೆ ಭೇಟಿ ನೀಡಿದಾಗ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿತು. ಅನಕ್ಷಸ್ಥರಾದ ಆ ಸಮುದಾಯದವರಿಗೆ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಂಡಳಿ ನಿಗಮ ಮಾಡಲಿದೆ ಎಂದರು.

ಉಪನಾಳ, ಭೀಮಗಡದಲ್ಲಿ ಕಿಳ್ಳೇಕೇತರಿದ್ದಾರೆ. ಅವರಿಗೆ ಪ್ರವರ್ಗ–1 ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅವರಿಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಸ್ಥಳೀಯ ಪಂಚನಾಮೆ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಐಹೊಳೆಯಲ್ಲಿರುವ ಕೊರವರ ಕಾಲೊನಿಯಲ್ಲಿ 30 ಕುಟುಂಬಗಳಿವೆ. ಒಂದೊಂದು ಮನೆಯಲ್ಲಿ 15 ರಿಂದ 20 ಜನರು ವಾಸಿಸುತ್ತಿದ್ದಾರೆ. ಪಾರಂಪರಿಕ ಕ್ಷೇತ್ರವಾಗಿರುವುದರಿಂದ ಮನೆ ವಿಸ್ತರಣೆಗೆ ಅವಕಾಶ ನೀಡುತ್ತಿಲ್ಲ. ಸರ್ಕಾರಿ ಜಾಗದ ಕೊರತೆಯಿದೆ. ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಭೂಮಿ ಖರೀದಿಸಲು ಸಿದ್ಧರಿದ್ದು, ಕೊಡುವವರಿದ್ದರೆ ಮುಂದೆ ಬರಬೇಕು ಎಂದರು.

ಜಿಲ್ಲೆಗೆ ₹2.14 ಕೋಟಿ ಅನುದಾನ ನೀಡಲಾಗಿದೆ. ನ.30ರೊಳಗೆ ಫಲಾನುಭವಿಗಳ ಆಯ್ಕೆ ಮಾಡಲು ಸೂಚಿಸಲಾಗಿದೆ. ಸರ್ಕಾರದ ವತಿಯಿಂದ ಮೇದಾರ ಕೇತೇಶ್ವರ ಜಯಂತಿ ಮಾಡಲು ಮನವಿ ಮಾಡಲಾಗಿದೆ. ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಹೇಳಿದರು.

ಅಲೆಮಾರಿಗಳಿಗೆ ಪ್ರತ್ಯೇಕ ಒಳಮೀಸಲಾತಿ ನೀಡದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.

ರವಿಕುಮರ, ಹನಮಂತು, ರವಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.