ADVERTISEMENT

ದೇಶದ ಸ್ವಾತಂತ್ರ್ಯ, ಅಭಿವೃದ್ಧಿಗೆ ಆರ್.ಎಸ್.ಎಸ್ ಕೊಡುಗೆ ಇಲ್ಲ: ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:09 IST
Last Updated 3 ಅಕ್ಟೋಬರ್ 2025, 4:09 IST
ಇಳಕಲ್‌ನಲ್ಲಿ ಎಸ್.ಆರ್.ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನದಿಂದ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಸೌಹಾರ್ದ ಪಾದಯಾತ್ರೆ ನಡೆಯಿತು
ಇಳಕಲ್‌ನಲ್ಲಿ ಎಸ್.ಆರ್.ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನದಿಂದ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಸೌಹಾರ್ದ ಪಾದಯಾತ್ರೆ ನಡೆಯಿತು   

ಇಳಕಲ್: ‘ಸ್ವಾತಂತ್ರ್ಯ, ದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದ ಆರ್.ಎಸ್.ಎಸ್ ಗೆ 100 ವರ್ಷವಾಗಿದೆಂದು ಪ್ರಧಾನಿ ಮೋದಿ ಅವರು ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿರುವುದು ಸರಿಯಲ್ಲ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಟೀಕಿಸಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಎಸ್.ಆರ್.ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನದಿಂದ ಗುರುವಾರ ನಡೆದ ಗಾಂಧಿ ಹಾಗೂ ಶಾಸ್ತ್ರೀ ಅವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿ ಭಾರತೀಯನ್ನು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಹಾಗೂ ಗೌರವಿಸಬೇಕು. ಆದರೆ ಆರ್.ಎಸ್.ಎಸ್ ಹಾಗೂ ಬಿಜೆಪಿ ಹರಡಿದ ಸುಳ್ಳುಗಳಿಂದಾಗಿ ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಇಂದು ಯುವ ಪೀಳಿಗೆ ಅವಹೇಳನ ಮಾಡುತ್ತಿದೆ. ಈಚೆಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ತಾನೇ ದೇಶ ಕಟ್ಟಿರುವಂತೆ ಆಡುತ್ತಿದೆ. ಒಂದೇ ಧರ್ಮ, ಒಂದೇ ಭಾಷೆ ಎಂದು ದೇಶದ ಬಹುತ್ವ, ಜಾತ್ಯತೀತ ತತ್ವವನ್ನು ನಾಶ ಮಾಡಿ, ದ್ವೇಷ ಬಿತ್ತುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಪ್ರಾಮಾಣಿಕ, ಸರಳ ವ್ಯಕ್ತಿತ್ವ ಹಾಗೂ ದಿಟ್ಟ ನಿರ್ಧಾರಗಳಿಂದ ಪ್ರಧಾನಿಯಾದವರು ಹೇಗಿರಬೇಕು ಎನ್ನುವುದಕ್ಕೆ ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರು ಮಾದರಿಯಾಗಿದ್ದರು. ಆದರೆ ಇವತ್ತಿನ ಪ್ರಧಾನಿ ಜನರ ತೆರಿಗೆ ದುಡ್ಡಿನಲ್ಲಿ ₹20 ಲಕ್ಷ ಗಳ ಸೂಟ್ ಹಾಕುತ್ತಾರೆ. ಎಲ್ಲೆಡೆ ದ್ವೇಷ ಭಾಷಣ ಮಾಡುತ್ತಾ ಕೋಮುವಾದ ಹರಡುತ್ತಿದ್ದಾರೆ. ದೇಶದ ಸಾಲವನ್ನು ₹200 ಲಕ್ಷ ಕೋಟಿಗೆ ಹೆಚ್ಚಿಸಿದ್ದು, ಧರ್ಮಗಳ ನಡುವೆ ಮತ್ತು ಜಾತಿಗಳ ನಡುವೆ ಬೆಂಕಿ ಹಚ್ಚಿದ್ದು ಇವರ ಸಾಧನೆಯಾಗಿದೆ’ ಎಂದು ಟೀಕಿಸಿದರು.

‘ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಜನರಿಗೆ ನೆರವು ನೀಡುತ್ತಿದೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದ್ದು, ಕೇಂದ್ರ ಸರ್ಕಾರ ರೈತರಿಗೆ ಒಂದು ಪೈಸೆ ನೀಡಿಲ್ಲ. ನಮ್ಮ ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್ ಗೆ ₹8500 ಪರಿಹಾರ ನೀಡಲು ₹2600 ಕೋಟಿ ಮೀಸಲಿಟ್ಟಿದೆ’ ಎಂದುಹೇಳಿದರು.

ಸಮಾರಂಭದ ನಂತರ ಕಂಠಿ ವೃತ್ತ ಮಾರ್ಗವಾಗಿ ಗಾಂಧಿ ಚೌಕ ವರೆಗೆ ಸೌಹಾರ್ದ ಪಾದಯಾತ್ರೆ ನಡೆಯಿತು. ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಮುಖಂಡರಾದ ಶಾಂತಕುಮಾರ ಸುರಪುರ, ವಿಜಯ ಗದ್ದನಕೇರಿ, ಶರಣಪ್ಪ ಆಮದಿಹಾಳ, ರಾಘು ಚಿಂಚಮಿ, ವಿಠಲ್ ಜಕ್ಕಾ, ಹುಸೇನಸಾಬ ಬಾಗವಾನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.