ADVERTISEMENT

ಮೀಸಲಾತಿ ಬಲಪಡಿಸಲು ಆರ್‌ಎಸ್‌ಎಸ್ ಬದ್ಧ: ವಾದಿರಾಜ್ ಅಭಿಮತ

ಮಾದಿಗರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸವಾಲುಗಳ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 14:17 IST
Last Updated 12 ಡಿಸೆಂಬರ್ 2021, 14:17 IST
ಬಾಗಲಕೋಟೆ ತಾಲ್ಲೂಕಿನ ಸೀತಿಮನಿಯ ಶ್ರದ್ಧಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸವಾಲುಗಳ ಕುರಿತ ವಿಚಾರ ಸಂಕಿರಣದಲ್ಲಿ ಆರ್‌ಎಸ್‌ಎಸ್ ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್ ಮಾತನಾಡಿದರು
ಬಾಗಲಕೋಟೆ ತಾಲ್ಲೂಕಿನ ಸೀತಿಮನಿಯ ಶ್ರದ್ಧಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸವಾಲುಗಳ ಕುರಿತ ವಿಚಾರ ಸಂಕಿರಣದಲ್ಲಿ ಆರ್‌ಎಸ್‌ಎಸ್ ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್ ಮಾತನಾಡಿದರು   

ಬಾಗಲಕೋಟೆ: ’ಮೀಸಲಾತಿ ವ್ಯವಸ್ಥೆ ಬಲಪಡಿಸಲು ಹಾಗೂ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬದ್ಧವಾಗಿದೆ‘ ಎಂದು ಸಂಘಟನೆಯ ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್ ಹೇಳಿದರು.

ತಾಲ್ಲೂಕಿನ ಸೀತಿಮನಿಯ ಶ್ರದ್ಧಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸವಾಲುಗಳ ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದಅವರು,ಮೀಸಲಾತಿ ಅಂಚಿನ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ತಲುಪಲು ಒಳ ಮೀಸಲಾತಿ ಸೂಕ್ತ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.

ನಕಲಿ ಪ್ರಮಾಣಪತ್ರ ನೀಡಿ ಪರಿಶಿಷ್ಟ ಜಾತಿ ಸವಲತ್ತು ಕಬಳಿಸುವವರು ಮೀಸಲಾತಿ ವ್ಯವಸ್ಥೆ ದುರ್ಬಲಗೊಳಿಸುತ್ತಿದ್ದಾರೆ. ಅದಕ್ಕೆ ಬಲವಾಗಿ ಪ್ರತಿರೋಧ ತೋರಬೇಕಿದೆ ಎಂದರು. ಮುಂದೆ ಒಳಮೀಸಲಾತಿ ಸಿಕ್ಕರೂ ಅದನ್ನು ಬಳಸಿಕೊಳ್ಳುವ ಶಕ್ತಿ ಮಾದಿಗ ಸಮಾಜಕ್ಕೆ ಬರಬೇಕು. ಆ ದಿಕ್ಕಿನಲ್ಲಿ ಸಮಾಜವನ್ನು ಸಜ್ಜುಗೊಳಿಸಬೇಕು ಎಂದು ಸಮುದಾಯದ ನಾಯಕರಿಗೆ ಹೇಳಿದರು.

ADVERTISEMENT

ಸಮಾಜದ ಮಕ್ಕಳು ಅರ್ಧಕ್ಕೆ ಶಾಲೆ ಬಿಡದಂತೆ, ಇಂಗ್ಲಿಷ್ ಭಾಷೆ ಕಲಿಕೆಗೆ ಹಾಗೂ ತಂತ್ರಜ್ಞಾನ ಬಳಕೆಯತ್ತ ಆಸಕ್ತಿ ಮೂಡಿಸಬೇಕು. ಅದಕ್ಕಾಗಿ ಹಾಸ್ಟೆಲ್ ವ್ಯವಸ್ಥೆ ಬಳಸಿಕೊಂಡು ಮಕ್ಕಳು ಹೆಚ್ಚು ಹೆಚ್ಚು ಶಿಕ್ಷಿತರಾಗುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಬಾಲ್ಯದಲ್ಲಿಯೇ ಮದುವೆ ಮಾಡುವುದು ಬಿಟ್ಟು ಅವರ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಣ, ಸಂಘಟನೆಗೆ ಆದ್ಯತೆ ನೀಡಿ ಸಮಾಜದ ಬೆಳವಣಿಗೆಯ ರಥ ಒಂದೇ ದಿಕ್ಕಿನಲ್ಲಿ ನಡೆಯುವಂತೆ ಮಾಡಬೇಕು. ಅದಕ್ಕಾಗಿ ಪಕ್ಷ, ಅಭಿಪ್ರಾಯ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಪ್ರಗತಿಯ ದಿಸೆಯಲ್ಲಿ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ 300ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಯಲ್ಲಣ್ಣ ಇಲಾಳ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆನ್ನೂರ, ಜಿಲ್ಲಾ ಅಧ್ಯಕ್ಷ ಸತೀಶ ಸೂಳಿಕೇರಿ, ಮುಖಂಡರಾದ ಎಂ.ಯು.ಮೂಗನೂರ, ವೈ.ರಾಜಣ್ಣ ತುರುವನೂರು, ವೈ.ಡಿ.ಆಲೂರ, ಶಿವಾನಂದ ಟವಳಿ, ಪರಶುರಾಮ ಹೊನ್ನಳ್ಳಿ, ಬಾಲು ಗೂಗಿಹಾಳ. ಮಹಾದೇವ ಮಾದರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.