ಬಾಗಲಕೋಟೆ: ‘ಗ್ರಾಮೀಣ ಸಮಾಜ ಕತೆಗಳ ಆಗರವೇ ಆಗಿದ್ದು, ಬಹಳಷ್ಟು ಕತೆಗಾರರು ಗ್ರಾಮೀಣ ಸಮಾಜವನ್ನಿಟ್ಟುಕೊಂಡು ಕತೆ ಬರೆದಿದ್ದಾರೆ. ಅದು ಮುಗಿಯದ ಕತೆಗಳ ಕಣಜ’ ಎಂದು ಸಾಹಿತಿ ಪ್ರಕಾಶ ಖಾಡೆ ಹೇಳಿದರು.
ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಗುರುವಾರ ಹಸನಡೋಂಗ್ರಿ ಬೇಪಾರಿ ಅವರ ‘ಅಮ್ಮ ಎಂಬ ಕಡಲು’ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನೆಲಮೂಲ ಸಂಸ್ಕೃತಿಯಿಂದಲೇ ಬಹಳಷ್ಟು ಸಾಹಿತಿಗಳು ಬಂದಿದ್ದಾರೆ. ಅಲ್ಲಿಯೇ ದಟ್ಟವಾದ ಅನುಭವ ದೊರೆಯುತ್ತದೆ’ ಎಂದರು.
‘ಬೇಪಾರಿ ಅವರು ಕತೆಗಳಲ್ಲಿ ಪಾತ್ರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹೊಸ, ಹೊಸ ಓದುಗರನ್ನು ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.
ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಲಲಿತಾ ಹೊಸಪ್ಯಾಟಿ ಮಾತನಾಡಿ, ‘ಕಥೆಯಲ್ಲಿ ನಿರೂಪಣಾ ಶೈಲಿ ಇರಬೇಕು. ಪಾತ್ರಗಳನ್ನು ಕಟ್ಟಿಕೊಡಬೇಕು. ಭಾವ ತುಂಬಬೇಕು. ಕಥೆಗಾರರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದರು.
‘ಸೃಜನಶೀಲರಾಗಿ ಬರೆಯುವುದು ಕಲೆ. ಸತ್ಯವನ್ನು ಒಳಗಣ್ಣಿನಿಂದ ನೋಡಬೇಕು. ಸಮಾಜದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡೊಂಗ್ರಿ ಅವರನ್ನು ಕಥೆ ಬಳಸಿಕೊಂಡಿದ್ದಾರೆ. ಸಂಕಲನದಲ್ಲಿ ಗಮನ ಸೆಳೆಯುವ ಕಥೆಗಳಿವೆ’ ಎಂದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಆರ್.ಜಿ. ಸನ್ನಿ ಮಾತನಾಡಿ, ‘ಪತ್ರಕರ್ತರಾಗಿಯೂ ಸಾಹಿತ್ಯ ರಚನೆ ಮಾಡಿದ್ದಾರೆ. ಅವರಿಂದ ಹೆಚ್ಚು, ಹೆಚ್ಚು ಸಾಹಿತ್ಯ ಕೃತಿಗಳು ಬರಲಿ’ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಸಾಹಿತಿ ಎಂ.ಬಿ. ಒಂಟಿ, ಪತ್ರಕರ್ತ ಶ್ರೀಶೈಲ ಬಿರಾದಾರ, ಕತೆಗಾರ ಹಸನಡೋಂಗ್ರಿ ಬೇಪಾರಿ ಇದ್ದರು.
ಕೃತಿ ಪರಿಚಯ:
ಕೃತಿ: ಅಮ್ಮ ಎಂಬ ಕಡಲು
ಲೇಖಕರು: ಹಸನಡೋಂಗ್ರಿ ಬೇಪಾರಿ
ಪ್ರಕಾಶನ: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
ಬೆಲೆ: ₹150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.