
ಇಳಕಲ್ : ‘ಹೆಣ್ಣುಮಕ್ಕಳ ಸಬಲೀಕರಣವು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು 175 ವರ್ಷಗಳ ಹಿಂದೆಯೇ ಶಾಲೆ ಆರಂಭಿಸಿದ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಭಾ ಫುಲೆ ದಂಪತಿ ಸ್ಮರಣೀಯರು' ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ದೀಪು ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ನಗರಸಭೆ ಹತ್ತಿರದ ಅಂಬೇಡ್ಕರ್ ಭವನದಲ್ಲಿ ಈಚೆಗೆ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ದೀಪು ದೀಕ್ಷಾ ಸಂಸ್ಥೆ ಸಮಾಜಮುಖಿ ಕಾರ್ಯಗಳಿಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ‘ಸಮಾಜದ ಮೇಲ್ವರ್ಗದ ವಿರೋಧದ ನಡುವೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲ ಸ್ವಾಭಿಮಾನದ ಬೀಜ ಬಿತ್ತಿದ ಸಾವಿತ್ರಿಬಾಯಿ ಅವರ ಪ್ರಯತ್ನ ಸದಾ ಸ್ಮರಣೀಯವಾದುದು’ ಎಂದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನರಾಜು ಉಪನ್ಯಾಸ ನೀಡಿದರು.
ಸವಿತಾ ಅಶೋಕ ಚಲವಾದಿ ಪ್ರಾಸ್ತಾವಿಕ ಮಾತನಾಡಿ, ದೀಪು ದೀಕ್ಷಾ ಸಂಸ್ಥೆಯ ಸೇವಾ ಕಾರ್ಯಗಳನ್ನು ವಿವರಿಸಿದರು.
ಗುರುಮಹಾಂತ ಶ್ರೀಗಳು, ನಂದವಾಡಗಿಯ ಚೆನ್ನಬಸವ ದೇಶಿಕೇಂದ್ರ ಶಿವಾಚಾರ್ಯರು ಹಾಗೂ ಹಜರತ್ ಸೈಯ್ಯದ್ ಷಾ ಮುರ್ತುಜ ಶಾ ಖಾದ್ರಿ ದರ್ಗಾ ಸಜ್ಜಾದ ನಶೀನ್ ಪೈಸಲ್ ಪಾಶಾ ಅವರು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ದೀಪು ದೀಕ್ಷಾ ಸಂಸ್ಥೆಯ ಅಧ್ಯಕ್ಷ ಅಶೋಕ ಚಲವಾದಿ, ವಿಜಯಮಹಾಂತೇಶ ಗದ್ದನಕೇರಿ, ಪವಾಡೆಪ್ಪ ಚಲವಾದಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.