ADVERTISEMENT

ಬಾಗಲಕೋಟೆ | ಬೇರೆ ಜಾತಿ ಧರ್ಮದವರನ್ನು ಪ್ರೀತಿಸಿ, ದ್ವೇಷಿಸಬೇಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 3:13 IST
Last Updated 14 ಅಕ್ಟೋಬರ್ 2025, 3:13 IST
ಬಾಗಲಕೋಟೆ ಜಿಲ್ಲೆಯ ಬಂಡಿಗಣಿ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು
ಬಾಗಲಕೋಟೆ ಜಿಲ್ಲೆಯ ಬಂಡಿಗಣಿ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು   

ಬಾಗಲಕೋಟೆ: ‘ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಬೇರೆ ಜಾತಿ, ಧರ್ಮದವರನ್ನು ಪ್ರೀತಿಸಬೇಕೇ ಹೊರತು‌ ದ್ವೇಷಿಸಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಬಂಡಿಗಣಿ ಗ್ರಾಮದಲ್ಲಿ ಬಸವಗೋಪಾಲ ನೀಲಮಾಣಿಕ ಮಠದಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಾಣಿಗಳನ್ನು ಪ್ರೀತಿಸುತ್ತೇವೆ. ಆದರೆ, ಮನುಷ್ಯರನ್ನು ದ್ವೇಷಿಸುತ್ತೇವೆ. ಪ್ರೀತಿಸುವುದು ಎಲ್ಲ ಧರ್ಮಗಳ ಮೂಲಮಂತ್ರವಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಇಸ್ಲಾಂ, ಹಿಂದೂಗಳ ರಕ್ತ ಬೇರೆ ಇರುತ್ತದೆಯೇ? ಕಾಯಿಲೆ ಬಿದ್ದಾಗ ಯಾರದ್ದೇ ರಕ್ತ ಕೊಟ್ಟರೂ ತೆಗೆದುಕೊಳ್ಳುತ್ತೇವೆ. ಆಮೇಲೆ ಯಾವ ಜಾತಿ ಎನ್ನುತ್ತೇವೆ. ಇದು ನ್ಯಾಯವೇ? ಧರ್ಮವೇ?’ ಎಂದು ಪ್ರಶ್ನಿಸಿದರು.

ADVERTISEMENT

‘ಜಾತಿ ವ್ಯವಸ್ಥೆಯಿಂದಾಗಿ ಇನ್ನೂ ಗುಲಾಮಗಿರಿ ಉಳಿದಿದೆ. ಮೇಲು ವರ್ಗದವರಾದರೆ ಗೌರವ ನೀಡುತ್ತಾರೆ. ಕೆಳ ವರ್ಗದವರಾದರೆ ಏಕ ವಚನದಲ್ಲಿ ಮಾತನಾಡುತ್ತಾರೆ. ಇದು ಗುಲಾಮಗಿರಿ ಸಂಕೇತ. ಮೌಢ್ಯ, ಕಂದಾಚಾರ ಆಚರಣೆ ಮಾಡುವುದಾದರೆ ವಿದ್ಯಾವಂತರಾಗಿ ಪ್ರಯೋಜನವಿಲ್ಲ. ಈ ವ್ಯವಸ್ಥೆಯನ್ನು ಕಿತ್ತು ಹಾಕಬೇಕು’ ಎಂದು ಮನವಿ ಮಾಡಿದರು.

‘ಚಲನೆ ಇಲ್ಲದ ಸಮಾಜವಿದೆ. ಜಾತಿ ರಹಿತ ಸಮಾಜ ನಿರ್ಮಾಣವಾಗಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಸಮಾನತೆ ಹೋಗುವವರೆಗೆ‌ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ. ಹೀಗೇ ಮುಂದುವರಿದರೆ ಒಂದು ದಿನ ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು’ ಎಂದು ಸ್ಮರಿಸಿಕೊಂಡರು.

‘ಸಂಪತ್ತನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕು. ಸಮಾಜ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೇಲೆ ಶೂ ಎಸೆದವನು ಸನಾತನ ಧರ್ಮಕ್ಕೆ ಸೇರಿದವನು. ಎಲ್ಲ ಧರ್ಮಗಳು ಎಲ್ಲರನ್ನೂ ಪ್ರೀತಿಸಿ ಎಂದು ಹೇಳಿವೆ. ಜನರನ್ನು ಪ್ರೀತಿಸೋಣ’ ಎಂದರು.

‘ನಾನು ಓದುತ್ತಿರುವಾಗ ಬಾವಿ ನೀರು ತರಲು ಹೋದರೆ ಗೇಟು ಹಾಕಿರುತ್ತಿದ್ದರು. ಬುದ್ಧ, ಬಸವಣ್ಣ, ಅಂಬೇಡ್ಕರ್‌ ಬಂದರೂ ಜಾತಿ ವ್ಯವಸ್ಥೆ ಹೋಗಿಲ್ಲ. ಸಮ ಸಮಾಜದ ಮಂತ್ರ ಹೇಳಿದ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಯಾರನ್ನೂ ಮೆಚ್ಚಿಸಲಿಕ್ಕೆ ಮಾಡಿಲ್ಲ’ ಎಂದರು.

ಸಮಬಾಳು ಸಮಪಾಲು ಎನ್ನುವ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಅವರ ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು
ಸಾಧು ಕೋಕಿಲ ಅಧ್ಯಕ್ಷ ಕರ್ನಾಟಕ ಚಲನಚಿತ್ರ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.