ADVERTISEMENT

ಬಾಡಗಂಡಿಯಲ್ಲಿ ಗ್ರಾಮ ಸ್ವರಾಜ್ಯ ಕನಸು ನನಸು: ಜಾರಕಿಹೊಳಿ

ಬೀಳಗಿ ಪಟ್ಟಣ ಸರ್ಕಾರಿ ಬ್ಯಾಂಕಿನ ರಜತ ಮಹೋತ್ಸವ;ವಿವಿಧ ಕಾರ್ಯಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:19 IST
Last Updated 27 ಜುಲೈ 2025, 2:19 IST
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು   

ಬೀಳಗಿ: ‘ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸನ್ನು ಮಾಜಿ ಸಚಿವ ಎಸ್‌.ಆರ್. ಪಾಟೀಲ ನನಸುಗೊಳಿಸಿದ್ದಾರೆ. ಸ್ವಂತ ಗ್ರಾಮದ ಅಭಿವೃದ್ಧಿಗೆ ಸಾವಿರ ಕೋಟಿ ವೆಚ್ಚ ಮಾಡಿದ ಬೇರೆ ಉದಾಹರಣೆ ಸಿಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೀಳಗಿ ಪಟ್ಟಣ ಸರ್ಕಾರಿ ಬ್ಯಾಂಕಿನ ರಜತ ಮಹೋತ್ಸವ ಅಂಗವಾಗಿ ಬ್ಯಾಂಕಿನ ನವೀಕೃತ ಕಟ್ಟಡ, ಶಾಖಾ ನೂತನ ಕಟ್ಟಡ ಮತ್ತು ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪಾಟೀಲರ ಸಾಧನೆ ನೋಡಿದಾಗ ನಾವೂ ನಮ್ಮ ಸ್ವಂತ ಗ್ರಾಮಗಳಿಗೆ ಏನಾದರೂ ಮಾಡಬೇಕು ಎಂದು ಪ್ರೇರಣೆಯಾಗುತ್ತದೆ’ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ‘ಎಸ್.ಆರ್. ಪಾಟೀಲ ಪರಿಶುದ್ಧ ಚಾರಿತ್ರ್ಯ ಹೊಂದಿರುವ ರಾಜಕಾರಣಿ. ಸಹಕಾರಿ ಸಂಸ್ಥೆಗಳಲ್ಲಿ ಒಗ್ಗಟ್ಟು ಹಾಗೂ ಒಳ್ಳೆಯ ನಾಯಕತ್ವ ಇದ್ದರೆ ಉತ್ತಮವಾಗಿ ಸಂಸ್ಥೆ ಬೆಳೆಸಬಹುದು ಎನ್ನುವುದಕ್ಕೆ ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ನಿದರ್ಶನವಾಗಿದೆ’ ಎಂದರು.

ADVERTISEMENT

‘ಸಂಸ್ಥೆಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಕಠಿಣ ಪರಿಸ್ಥಿತಿ ನಿಭಾಯಿಸುವ ಚಾಕಚಕ್ಯತೆ ಅವರಿಗೆ ಕರಗತವಾಗಿದೆ’ ಎಂದು ಹೇಳಿದರು.

ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಅಧಿಕಾರ ಬರಬಹುದು, ಹೋಗಬಹುದು. ಆದರೆ, ಪಾಟೀಲರು ಕಟ್ಟಿದ ಸಂಸ್ಥೆಗಳು ಎಂದೆಂದಿಗೂ ಅಜರಾಮರ. ಪ್ರಾಥಮಿಕ ಶಿಕ್ಷಣದಿಂದ ವೈದ್ಯಕೀಯ ಶಿಕ್ಷಣದವರೆಗೂ ಸಂಸ್ಥೆ ಬೆಳೆಸಿರುವುದು ಅವರ ಸಾಹಸಮಯ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ‘ಸರ್ಕಾರ ಮಾಡದಿರುವ ಕೆಲಸಗಳನ್ನು ಎಸ್.ಆರ್. ಪಾಟೀಲ ಮಾಡಿದ್ದಾರೆ’ ಎಂದು ಹೇಳಿದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ‘ಬಾಡಗಂಡಿ ಗ್ರಾಮವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಪಾಟೀಲರು  ಮಾಡಿದ್ದಾರೆ’ ಎಂದರು.

ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಕವಿ ಸತ್ಯಾನಂದ ಪಾತ್ರೋಟ ಸಂಪಾದಿಸಿದ ‘ಪರಿಶ್ರಮ’ ನೆನಪಿನ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಈ ಶಿಕ್ಷಣ ಸಂಸ್ಥೆ ನೋಡಿದಾಗ ನಳಂದಾ ವಿಶ್ವವಿದ್ಯಾಲಯವನ್ನು ನೆನಪಿಗೆ ಬರುತ್ತದೆ. ಈ ಭಾಗದ ಇತಿಹಾಸದ ಪುಟಗಳಲ್ಲಿ ಬರೆದಿಡುವ ಕಾರ್ಯವಾಗಿದೆ ಎಂದರು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿದರು. ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಮಾಜಿ ಕಾರ್ಯದರ್ಶಿ ಎಸ್.ಎಸ್. ಹಳ್ಳೂರ, ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ಮಾಜಿ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್. ಪಾಟೀಲ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಆರ್. ಮೇಲ್ನಾಡ, ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬನಹಟ್ಟಿ, ನಿರ್ದೇಶಕ ಮಂಡಳಿ ಸದಸ್ಯರು, ಸಾಹಿತಿ ಸತ್ಯಾನಂದ ಪಾತ್ರೋಟ ಇದ್ದರು.

ಎಸ್ಆರ್ ಪಾಟೀಲ ಸಮೂಹ ಸಂಸ್ಥೆಗಳ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿರುವ ಜನಸ್ತೋಮ

ಏಳನೇ ವೇತನ ಆಯೋಗ ವರದಿ ಜಾರಿ: ಪಾಟೀಲ

ಬೀಳಗಿ: ‘ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ 2026 ಜ.1ರಿಂದ 7ನೇ ವೇತನ ಆಯೋಗದ ಪ್ರಕಾರ ವೇತನ ನೀಡಲಾಗುವುದು’ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಪಾಟೀಲ ಹೇಳಿದರು.

‘ಬಾಪೂಜಿ ಸೌಹಾರ್ದ ಸಹಕಾರ ಸಂಘ ಇನ್ಮುಂದೆ ಬಾಪೂಜಿ ಮಲ್ಟಿಸ್ಟೇಟ್ ಸೊಸೈಟಿಯಾಗಿದ್ದು ಈ ಬಗ್ಗೆ ಈಗಾಗಲೇ ಆದೇಶವಾಗಿದೆ. ಬೇರೆ ರಾಜ್ಯಗಳಲ್ಲಿಯೂ ಶಾಖೆಗಳನ್ನು ಆರಂಭಿಸಲಾಗುವುದು’ ಎಂದರು.

‘ಸಂತ್ರಸ್ತರು ಬದುಕನ್ನು ಕಟ್ಟಿಕೊಳ್ಳಲಿ ಆರ್ಥಿಕವಾಗಿ ಸದೃಢವಾಗಲಿ ಎಂದು ಬ್ಯಾಂಕ್ ಪ್ರಾರಂಭಿಸಿದೆವು. ಸಮೂಹ ಸಂಸ್ಥೆಯಲ್ಲಿ 10 ಸಾವಿರ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಾತ್ಯತೀತ ಪಕ್ಷಾತೀತ ಧರ್ಮಾತೀತವಾಗಿರುವ ಈ ಸಂಸ್ಥೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದರು.

ಜನ್ಮ ದಿನದಂದು ಅದ್ದೂರಿ ಕಾರ್ಯಕ್ರಮ ಹಾರ ತುರಾಯಿಗೆ ಅವಕಾಶ ನೀಡುವುದಿಲ್ಲ. ಪ್ರತಿ ಕ್ಷಣವನ್ನು ಸಮಾಜ ಜನ ಉಪಯೋಗಿ ಕಾರ್ಯ ಮಾಡುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.