ADVERTISEMENT

ಶಿಷ್ಯವೇತನಕ್ಕಾಗಿ ನೋಂದಣಿ ಅಭಿಯಾನ: ಶಾಲಾ ಮಕ್ಕಳ ವಾಕಥಾನ್‌ಗೆ ಸಿಇಒ ಚಾಲನೆ

ಮೂರು ಸಾವಿರ ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 14:31 IST
Last Updated 4 ಸೆಪ್ಟೆಂಬರ್ 2018, 14:31 IST
ಬಾಗಲಕೋಟೆಯಲ್ಲಿ ಮಕ್ಕಳ ವಾಕಥಾನ್‌ಗೆ ಮಂಗಳವಾರ ಸಿಇಒ ಗಂಗೂಬಾಯಿ ಮಾನಕರ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ಮಕ್ಕಳ ವಾಕಥಾನ್‌ಗೆ ಮಂಗಳವಾರ ಸಿಇಒ ಗಂಗೂಬಾಯಿ ಮಾನಕರ ಚಾಲನೆ ನೀಡಿದರು   

ಬಾಗಲಕೋಟೆ: ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಹೊಸ ತಂತ್ರಾಂಶವನ್ನು ಸರ್ಕಾರ ಅಭಿವೃದ್ದಿ ಪಡಿಸಿದೆ.ಆ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿರುವ ಶಾಲಾ ಮಕ್ಕಳ ವಾಕಾಥಾನ್‌ಗೆ ಮಂಗಳವಾರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಚಾಲನೆ ನೀಡಿದರು.

ನಗರದ ಸಕ್ರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಜಾಥಾದ ವೇಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ ನಡೆಯಿತು.

’ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಸಲುವಾಗಿ ಆನ್‌ಲೈನ್ ಮೂಲಕ ಅರ್ಜಿ ಪಡೆಯಲಾಗುತ್ತಿದೆ. ಸಂಬಂಧಿಸಿದ ಮಾಹಿತಿಯನ್ನು ಪಾಲಕರಿಂದ ತುಂಬಿಸಿಕೊಂಡು ಶಾಲೆಗಳಲ್ಲಿ ಆನ್‌ಲೈನ್‌ ಮೂಲಕ ಭರ್ತಿ ಮಾಡಬೇಕಾಗಿದೆ. ಆದ್ದರಿಂದ ಈ ಮಾಹಿತಿಯನ್ನು ವಿದ್ಯಾರ್ಥಿಗಳು ತಮ್ಮ ಪಾಲಕರ ಗಮನಕ್ಕೆ ತರಬೇಕು’ ಎಂದು ಸಿಇಒ ತಿಳಿಸಿದರು.

ADVERTISEMENT

ಪ್ರತಿ ವಿದ್ಯಾರ್ಥಿಗೂ ಶಿಷ್ಯವೇತನ ತಲುಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಗೆ ಸೇರಿದೆ. ಆ ನಿಟ್ಟಿನಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಅನುಷ್ಠಾನದ ಹೊಣೆ ಹೊತ್ತಿವೆ.

’ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಮೊದಲಿನಂತೆ ಅಂಚೆ ಕಚೇರಿ ಮೊರೆ ಹೋಗುವಂತಿಲ್ಲ. ಬದಲಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿ ಕೊರತೆಯಾದಲ್ಲಿ ಶಾಲೆಯಲ್ಲಿಯೇ ಶಿಕ್ಷಕರ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ’ ಎಂದರು.

ವಿದ್ಯಾರ್ಥಿ ವೇತನಕ್ಕಾಗಿ ಯಾವುದೇ ದಾಖಲೆ ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಸಲ್ಲಿಸಿದ ದಾಖಲೆಗಳ ಸಂಖ್ಯೆಗಳನ್ನು ನೇರವಾಗಿ ಆಯಾ ಶಾಲೆಯ ಮುಖ್ಯ ಶಿಕ್ಷಕರ ಸಹಕಾರದಿಂದ ನಿಗದಿಪಡಿಸಿದ ಕೇಂದ್ರಗಳಲ್ಲಿ ನೋಂದಣಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಕೊನೆಯ ದಿನ ಸೆಪ್ಟೆಂಬರ್ 30 ಆಗಿದ್ದು, ವೆಬ್‌ಸೈಟ್ ssp.karnataka. gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಜಾಗೃತಿ ಜಾಥಾ ಸಕ್ರಿ ಹೈಸ್ಕೂಲ್ ಮೈದಾನದಿಂದ ಆರಂಭಗೊಂಡು ಸರ್ಕಾರಿ ಬಾಲಕಿಯರ ಶಾಲೆ ಮಾರ್ಗವಾಗಿ 50 ಹಾಸಿಗೆ ಆಸ್ಪತ್ರೆ, ಕೆರೂಡಿ ಆಸ್ಪತ್ರೆ, ದುರ್ಗಾ ವಿಹಾರ, ರೇಲ್ವೆ ಸ್ಟೇಶನ್, ಕೇಂದ್ರ ಬಸ್ ನಿಲ್ದಾಣ, ಸುಖಸಾಗರ ಹೊಟೇಲ್, ಬಸವೇಶ್ವರ ಸರ್ಕಲ್‌ವರೆಗೆ ಸಾಗಿ ಮುಕ್ತಾಯಗೊಂಡಿತು. ಜಾಥಾದಲ್ಲಿಮೂರು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ ಚೌಹಾಣ ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.