ADVERTISEMENT

ತೇರದಾಳ ಸಬ್‌ರಿಜಿಸ್ಟ್ರಾರ್ ಕಚೇರಿ: ಸಮಸ್ಯೆಗಳ ಆಗರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:46 IST
Last Updated 12 ನವೆಂಬರ್ 2019, 16:46 IST
ತೇರದಾಳ ಉಪನೋಂದಣಿ ಕಚೇರಿಯಲ್ಲಿ ಸರ್ವರ್ ಸೇರಿದಂತೆ ಮತ್ತಿತರ ಸಮಸ್ಯೆಯಿಂದ ಕೆಲಸ ವಿಳಂಬವಾಗುತ್ತಿರುವ ಕಾರಣ ಕಚೇರಿ ಎದುರು ಸರದಿಯಲ್ಲಿ ಕುಳಿತ ಜನರು.
ತೇರದಾಳ ಉಪನೋಂದಣಿ ಕಚೇರಿಯಲ್ಲಿ ಸರ್ವರ್ ಸೇರಿದಂತೆ ಮತ್ತಿತರ ಸಮಸ್ಯೆಯಿಂದ ಕೆಲಸ ವಿಳಂಬವಾಗುತ್ತಿರುವ ಕಾರಣ ಕಚೇರಿ ಎದುರು ಸರದಿಯಲ್ಲಿ ಕುಳಿತ ಜನರು.   

ತೇರದಾಳ: ಇಲ್ಲಿನ ಉಪನೋಂದಣಿ ಕಚೇರಿಗೆ ಬರುವ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. 2013ರಲ್ಲಿ ಪ್ರಾರಂಭಗೊಂಡ ಉಪನೋಂದಣಾಧಿಕಾರಿ ಕಚೇರಿ ಸಾಕಷ್ಟು ಆದಾಯ ಹೊಂದಿದೆ. ಆದರೆ ಕಚೇರಿಗೆ ಬೇಕಾದ ಅಗತ್ಯ ಸಿಬ್ಬಂದಿ, ಪ್ರಿಂಟರ್, ಸ್ಕ್ಯಾನರ್, ಬ್ಯಾಟರಿ ಸೇರಿದಂತೆ ಅಗತ್ಯ ಉಪಕರಣಗಳ ಪೂರೈಕೆ ಆಗಿಲ್ಲ.

ಅಲ್ಲದೇ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಬಳಕೆಯಾಗಬೇಕಾದ ಜನರೇಟರ್‌ಗೆ ಬ್ಯಾಟರಿ ಕೂಡ ಇಲ್ಲ. ಅದು ಕಾರ್ಯನಿರ್ವಹಿಸದೇ ವರ್ಷಗಳೇ ಕಳೆದಿವೆ. ಇದರಿಂದ ವಿದ್ಯುತ್ ಸ್ಥಗಿತಗೊಂಡರೆ ಇಡೀ ಕಚೇರಿಯ ಕಂಪ್ಯೂಟರ್‌ಗಳು ಆಫ್ ಆಗುತ್ತವೆ. ಸದಾ ಸರ್ವರ್ ಸಮಸ್ಯೆ ಇದ್ದು, ಸರಿ ಮಾಡಲು ಬೆಂಗಳೂರು ಕಚೇರಿಯೊಂದಿಗೆ ಸಂಪರ್ಕ ಸಾಧಿಸಬೇಕು. ಆಗಲೂ ವಿದ್ಯುತ್ ಕಡಿತಗೊಂಡರೆ ಅಂದಿನ ಕೆಲಸ ಮುಗಿಯುತ್ತದೆ.

ಸಾರ್ವಜನಿಕರುಹಲವು ತಿಂಗಳುಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ದೂರದ ಬೆಂಗಳೂರಿನ ಟೆಂಡರ್‌ದಾರರತ್ತ ಕೈ ತೋರಿಸುತ್ತಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಕಳೆದ ಎರಡು ದಿನಗಳಿಂದ ಈ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ತೇರದಾಳ ಉಪನೋಂದಣಿ ಕಚೇರಿಯಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

’ಈ ಕಚೇರಿಯಲ್ಲಿ ನೋಂದಣಿಗಾಗಿ ಎರಡು ದಿನಗಳಿಂದ ಬಂದು ಹೋಗುತ್ತಿದ್ದು, ಸಣ್ಣ ಕೆಲಸಕ್ಕೂ ಕೂಡ ಈ ರೀತಿ ಅಡ್ಡಾಡಿದರೆ ರೈತಾಪಿ ವರ್ಗದ ನಮ್ಮ ಉಳಿದ ಕೆಲಸ ಕಾರ್ಯಗಳ ಗತಿಯೇನು’ ಎಂದು ಯರಗಟ್ಟಿಯ ಮಂಜುನಾಥ ಸಿರಗಾರ ಪ್ರಶ್ನಿಸುತ್ತಾರೆ.

’ಆಸ್ತಿ ನೋಂದಣಿಗೆ ಮನೆಯವರೆಲ್ಲರೂ ಸಹಿ ಅವಶ್ಯವೆಂದು ಎರಡು ದಿನಗಳಿಂದ ಕುಟುಂಬಸ್ಥರೆಲ್ಲ ಕಚೇರಿ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತುಕೊಳ್ಳಬೇಕಿದೆ. ಸಂಜೆಯಾಗುತ್ತಲೇ ಕೆಲಸವೂ ಇಲ್ಲ ಕಾರ್ಯವೂ ಇಲ್ಲದೇ ಮರಳಿ ಮನೆಯತ್ತ ಹೋಗಬೇಕಿದೆ. ಹೀಗಾದರೆ ನಮ್ಮಂತ ಬಡವರ ಪಾಡೇನು’ ಎಂದುತೇರದಾಳದ ಪುಂಡಲಿಕ ಅಂಬಲಿ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.