ADVERTISEMENT

ಈಡೇರಿದ ಕಬ್ಬು ಬೆಳೆಗಾರರ ಬೇಡಿಕೆ: ಮುಧೋಳ ಪ್ರತಿಭಟನೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 13:53 IST
Last Updated 14 ನವೆಂಬರ್ 2025, 13:53 IST
   

ಬಾಗಲಕೋಟೆ: ಹಿಂದಿನ ವರ್ಷಗಳ ಬಾಕಿ ಪಾವತಿ ಮಾಡುವುದು. ಈ ವರ್ಷದ ಕಬ್ಬಿನ ಬಿಲ್ ಅನ್ನು 14 ದಿನಗಳಲ್ಲಿ ಪಾವತಿಸುವುದು. ರಿಕವರಿ ಆಧರಿಸದೇ ಎಲ್ಲ ರೈತರಿಗೆ ಪ್ರತಿ ಟನ್‌ಗೆ ಕಬ್ಬಿಗೆ ₹3,300 ಪಾವತಿಸಲು ಕಾರ್ಖಾನೆ ಮಾಲೀಕರು ಒಪ್ಪಿದ ಪರಿಣಾಮ ಮುಧೋಳದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತರು ಶುಕ್ರವಾರ ಕೈಬಿಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಎರಡೂ ಕಡೆಯವರು ಮೇಲಿನ ಅಂಶಗಳಿಗೆ ಸಮ್ಮತಿ ಸೂಚಿಸಿದರು. ಪರಿಣಾಮ ಶುಕ್ರವಾರದಿಂದಲೇ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಯುವುದನ್ನು ಆರಂಭಿಸಿವೆ.

‘ಹಿಂದಿನ ವರ್ಷಗಳ ₹100 ಕೋಟಿ ಬಾಕಿ ಈಗಾಗಲೇ ಪಾವತಿಸಿದ್ದಾರೆ. ಉಳಿದ ₹25 ಕೋಟಿ ಬಾಕಿಯನ್ನು ಎರಡು ದಿನಗಳಲ್ಲಿ ಪಾವತಿಸುವುದಕ್ಕೆ, ರಿಕವರಿ ಎಷ್ಟೇ ಇರಲಿ, ಪ್ರತಿ ಟನ್‌ಗೆ ₹3,300 ನೀಡಲು ಒಪ್ಪಿಕೊಂಡಿರುವುದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ತಿಳಿಸಿದರು.

ADVERTISEMENT

‘ರಿಕವರಿ ಆಧರಿಸಿ ಬೆಲೆ ನೀಡುವುದಕ್ಕೆ ನಮ್ಮ ವಿರೋಧವಿತ್ತು. ಆದ್ದರಿಂದ ಪ್ರತಿಭಟನೆಗೆ ಇಳಿದಿದ್ದೆವು. ಎಲ್ಲರೂ ಒಂದೇ ಬೆಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಬೆಂಕಿ ಹಚ್ಚಿದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇಷ್ಟು ವರ್ಷಗಳಲ್ಲಿ ಎಂದೂ ಇಂತಹ ಘಟನೆ ನಡೆದಿರಲಿಲ್ಲ’ ಎಂದರು.

‘ರೈತರು ಹಾಗೂ ಕಾರ್ಖಾನೆಯವರು ಒಪ್ಪಿಕೊಂಡಿರುವುದರಿಂದ ಸಮಸ್ಯೆ ಬಗೆಹರಿದಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಆರಂಭವಾಗಿವೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.