ADVERTISEMENT

ಶಿಕ್ಷಕ ವೃತ್ತಿಯೊಟ್ಟಿಗೆ ಕೃಷಿಯಲ್ಲೂ ಛಾಪು

ಬಸವರಾಜ ಅ.ನಾಡಗೌಡ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ಶೇಷನಗೌಡ
ಶೇಷನಗೌಡ   

ಇಳಕಲ್ : ಶಾಲಾ ಅವಧಿಯ ನಂತರ ಒಂದು ಕ್ಷಣ ವ್ಯರ್ಥವಾಗಿ ಕಳೆಯದೇ, ಹೊಲದತ್ತ ಹೆಜ್ಜೆ ಹಾಕುವ ಚಿನ್ನಾಪುರ ಎಸ್‍.ಟಿ ಗ್ರಾಮದ ವಿಜ್ಞಾನ ಶಿಕ್ಷಕ ಶೇಷನಗೌಡ ಪಾಟೀಲ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ. ಶೇಷನಗೌಡರು ಸದ್ಯ ಇಳಕಲ್ ನಿವಾಸಿ.ಕುಷ್ಟಗಿ ತಾಲ್ಲೂಕಿನ ಮನ್ನೆರಾಳದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ.

ಸರ್ಕಾರಿ ಉದ್ಯೋಗ ಇದ್ದರೂ ಐಷಾರಾಮಿ ಬದುಕಿಗೆ ಆಕರ್ಷಿತರಾಗಿಲ್ಲ. ಶ್ರಮದಿಂದ ದೂರವಾಗಿಲ್ಲ. ಕೃಷಿ ಅವರಿಗೆ ಕೇವಲ ಆದಾಯ ತರುವ ಚಟುವಟಿಕೆ ಅಲ್ಲ. ಅದು ಬದುಕನ್ನು ಸರಳ, ನೇರ ಹಾಗೂ ಆರೋಗ್ಯವಾಗಿಡುವ ಪವಿತ್ರ ಕಾಯಕ. ಮಣ್ಣು ಮತ್ತು ನೀರು ನಿರ್ವಹಣೆ ಬಗೆಗಿನ ಅವರ ಜ್ಞಾನವು ಅನುಭವಿ ರೈತರಿಗಿಂತ ಕಡಿಮೆ ಇಲ್ಲ.

ಶೇಷನಗೌಡರಿಗೆ ವಿದ್ಯಾರ್ಥಿ ದೆಸೆಯಿಂದಲೂ ಕೃಷಿಯಲ್ಲಿ ಅಪಾರ ಆಸಕ್ತಿ. ಬಿಡುವಿನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾ ಬೆಳೆದವರು. ಹೆದ್ದಾರಿಗೆ ಹೊಂದಿಕೊಂಡು ಅಗ್ನಿಶಾಮಕ ಠಾಣೆಯ ಹತ್ತಿರ 7 ಎಕರೆ, ಚಿನ್ನಾಪುರದ ಹತ್ತಿರ 7 ಎಕರೆ ಒಟ್ಟು 14 ಎಕರೆ ಕೃಷಿ ಜಮೀನು ಹೊಂದಿದ್ದು, ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 8ಗಂಟೆಯವರೆಗೆ ಹೊಲದಲ್ಲಿ ಬೆವರು ಹರಿಸಿ, ಆರೋಗ್ಯ ಹಾಗೂ ಫಸಲು ಎರಡನ್ನೂ ಪಡೆದುಕೊಂಡಿದ್ದಾರೆ.

ADVERTISEMENT

ಹೊಲಗಳನ್ನು ಅಂಗೈಯಂತೆ ಸಮತಟ್ಟುಗೊಳಿಸಿದ್ದಾರೆ. ಹಿಡಿ ಮಣ್ಣು ಹಾಗೂ ಹನಿ ನೀರು ಹೊರ ಹೋಗದಂತೆ ಒಡ್ಡು ಹಾಕಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಲ್ಲ. ಮೂರು ವರ್ಷಕ್ಕೊಮ್ಮೆ ದನ, ಕುರಿ ಹಾಗೂ ಕೋಳಿ ಗೊಬ್ಬರ ಹಾಕುತ್ತಾರೆ. ಈ ವರ್ಷದ ಉತ್ತಮ ಮಳೆಯ ಪರಿಣಾಮ 1 ತಿಂಗಳಿನ ಇವರ ಹೊಲದ ಕಡಲೆ ಬೆಳೆ ಜನ ನಿಂತು ನೋಡುವಷ್ಟು ಆರೋಗ್ಯಕರವಾಗಿದೆ.

ಉತ್ತಮ ಮಾರುಕಟ್ಟೆ ಇಲ್ಲದಿರುವುದೇ ಕೃಷಿಕರ ಸಂಕಷ್ಟಕ್ಕೆ ಕಾರಣ. ನವಣೆ ಬೆಳೆಯಲು ಪ್ರತಿ ಹೆಕ್ಟೆರ್‌ಗೆ ಕೃಷಿ ಇಲಾಖೆ ₹2500 ಸಹಾಯಧನ ನೀಡುತ್ತದೆ. ಅದರ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ಸಿರಿಧಾನ್ಯಗಳ ಸಂಸ್ಕರಣೆಗೆ ಬೇಕಾದ ಗಿರಣಿ ಈ ಭಾಗದಲ್ಲಿಲ್ಲ. ಪ್ರತಿ ಕೆ.ಜಿ ನವಣೆಗೆ ರೈತನಿಗೆ ₹15 ಸಿಗುತ್ತದೆ. ವ್ಯಾಪಾರಿಗಳು ಅದನ್ನು ಕೆ.ಜಿಗೆ ₹20ರಂತೆ ಮಹಾರಾಷ್ಟ್ರದ ಗಿರಣಿಗಳಿಗೆ ಮಾರುತ್ತಾರೆ. ಸಂಸ್ಕರಣೆಗೊಂಡ ನಂತರ ಅದು ಮತ್ತೆ ನಮ್ಮಲ್ಲಿಗೆ ಬಂದು ಕೆ.ಜಿಗೆ ₹70ರಂತೆ ಮಾರಾಟವಾಗುತ್ತಿದೆ ಎನ್ನುತ್ತಾರೆ.

ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಉದ್ಯಮಗಳು ಹೆಚ್ಚಬೇಕು. ಮಾರುಕಟ್ಟೆ ವ್ಯವಸ್ಥೆ ಬಲಪಡಿಸಬೇಕು. ಆಗ ಕೃಷಿಕರ ಸಂಕಷ್ಟಗಳಿಗೆ ಪರಿಹಾರ ಲಭಿಸಬಹುದು’ ಎನ್ನುವುದು ಶೇಷನಗೌಡ್ರ ಅಭಿಪ್ರಾಯ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9342656535 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.